HomeGadag Newsಸ್ಪರ್ಧಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಜರುಗಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ಸ್ಪರ್ಧಾ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಜರುಗಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಜನವರಿ 3 ಮತ್ತು 4ರಂದು ಹಮ್ಮಿಕೊಳ್ಳಲಾಗುತ್ತಿದ್ದು, ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ಹಾಗೂ ಸಂಭ್ರಮದಿಂದ ಜರುಗಿಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ 2025-26ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ ಕುರಿತು ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ 2026ರ ಜ. 3ರಂದು ಬೆಳಿಗ್ಗೆ 10.30 ಗಂಟೆಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಜರುಗಲಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮಾನಸಿಕ ಹಾಗೂ ದೈಹಿಕ ಸದೃಢತೆಗಾಗಿ ಪ್ರತಿಯೊಬ್ಬರಿಗೆ ಅತ್ಯವಶ್ಯಕವಾಗಿದ್ದು, ಸರ್ಕಾರಿ ನೌಕರರು ಸ್ಪೂರ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸುವಂತಾಗಬೇಕು. ಸೋಲು ಅಥವಾ ಗೆಲುವನ್ನು ಗಣನೆಗೆ ತೆಗೆದುಕೊಳ್ಳದೇ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಕ್ರೀಡಾ ಮನೋಭಾವನೆ ಮೆರೆಯುವಂತಾಗಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಸುವ್ಯವಸ್ಥಿತ ಆಯೋಜನೆಗೆ ಪೊಲೀಸ್ ಇಲಾಖೆಯ ಸಹಕಾರ ಸದಾ ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ತಮ್ಮ ಕುಟುಂಬದ ಸಮೇತ ಬಂದು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡಿ ಆನಂದಿಸಬೇಕೆಂದು ಹೇಳಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲು ಎಲ್ಲ ನೌಕರರು ಆಸಕ್ತಿಯಿಂದ ಪಾಲ್ಗೊಳ್ಳಬೇಕು. ಎಲ್ಲರ ಪಾಲ್ಗೊಳ್ಳುವಿಕೆ ಮೂಲಕವೇ ಕ್ರೀಡಾಕೂಟಗಳು ಯಶಸ್ವಿಯಾಗಲು ಸಾಧ್ಯ. ಮನರಂಜನಾ ಕಾರ್ಯಕ್ರಮಗಳಲ್ಲಿ ಸಹ ನೌಕರರು ತಮ್ಮ ಕುಟುಂಬ ಪರಿವಾರದೊಂದಿಗೆ ಆಗಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸಬೇಕೆಂದರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಮಾತನಾಡಿ, ಕ್ರೀಡಾಕೂಟ ಯಶಸ್ವಿಯಾಗುವಲ್ಲಿ ತಾಲೂಕಾ ನೌಕರರ ಸಂಘದ ಅಧ್ಯಕ್ಷರ ಪಾಲ್ಗೊಳ್ಳುವಿಕೆ ಕಾರಣವಾಗುತ್ತದೆ. ಜೊತೆಗೆ ತಾಲೂಕಿನಿಂದ ಆಗಮಿಸುವ ನೌಕರರಿಗೆ ಕಾರ್ಯಕ್ರಮದ ನಂತರ ತೆರಳಲು ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹಾಂತೇಶ ಸಜ್ಜನರ್, ಅಧಿಕಾರಿಗಳಾದ ಕೊಟ್ರೇಶ್ ವಿಭೂತಿ, ಶ್ರೇಷ್ಠಶೈಲ ಸೋಮನಕಟ್ಟಿ, ಡಾ. ಎಚ್.ಬಿ. ಹುಲಗಣ್ಣವರ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರು, ತಾಲೂಕಾಧ್ಯಕ್ಷರು, ಪದಾಧಿಕಾರಿಗಳಾದ ರಾಜು ಸೋಪಡ್ಲ, ವಸಂತ ಮಡ್ಲೂರ, ರಾಜು ಕಂಠಿಗೊಣ್ಣವರ, ಶ್ರೀಧರ ಚಿನಗುಡಿ, ಮುತ್ತು ಮಾಳಶೆಟ್ಟಿ, ಡಿ.ಎಸ್. ತಳವಾರ, ಮಹಾಂತೇಶ ನಿಟ್ಟಾಲಿ, ಸಿದ್ದಪ್ಪ ಲಿಂಗಧಾಳ, ತಿಪ್ಪಣ್ಣ, ಬಾದನಟ್ಟಿ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಕ್ರೀಡಾಪಟುಗಳು ವಿವಿಧ ತಾಲೂಕುಗಳಿಂದ ಆಗಮಿಸುವುದರಿಂದ ಅವರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಕೈಗೊಳ್ಳಬೇಕು. ಸ್ಪರ್ಧಾರ್ಥಿಗಳಿಗೆ ಎರಡು ದಿವಸಗಳ ಕಾಲ ಊಟ ಮತ್ತು ಉಪಹಾರದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಸರ್ಕಾರಿ ನೌಕರರ ಸಂಘದ ಸಹಭಾಗಿತ್ವದೊಂದಿಗೆ ಹೆಚ್ಚಿನ ಆಸಕ್ತಿ ವಹಿಸಿ ಸ್ಪರ್ಧೆಗಳನ್ನು ಯಶಸ್ವಿಗೊಳಿಸುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!