ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿ.ಇ.ಟಿ) ಡಿಸೆಂಬರ್ 7ರಂದು ಪಾರದರ್ಶಕವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಟಿ.ಇ.ಟಿ. ಪರೀಕ್ಷೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಗಳಲ್ಲಿ ಯಾವುದೇ ಅಕ್ರಮ, ಅವ್ಯವಹಾರಗಳು ನಡೆಯದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಗದಗ ನಗರದ 27 ಪರೀಕ್ಷಾ ಕೇಂದ್ರಗಳಲ್ಲಿ ಟಿ.ಇ.ಟಿ ಪರೀಕ್ಷೆಗಳು ನಡೆಯಲಿದ್ದು, ಅಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ, ಪರೀಕ್ಷಾ ಅವಧಿಯಲ್ಲಿ ಯಾವುದೇ ಲೋಪ–ದೋಷಗಳಾಗದಂತೆ ಕ್ರಮ ವಹಿಸಬೇಕು. ಒಟ್ಟಾರೆಯಾಗಿ ಟಿ.ಇ.ಟಿ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಪರೀಕ್ಷಾ ಕೇಂದ್ರಗಳಿಗೆ 12 ಮಾರ್ಗಗಳನ್ನು ರಚಿಸಲಾಗಿದೆ. ಪ್ರಥಮ ಅಧಿವೇಶನ ಪರೀಕ್ಷೆ ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ, ದ್ವಿತೀಯ ಅಧಿವೇಶನ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ ಮ. 4.30 ಗಂಟೆಯವರೆಗೆ ಜರುಗಲಿವೆ. ಪ್ರಥಮ ಅಧಿವೇಶನ ಪರೀಕ್ಷೆಯನ್ನು 2159 ಅಭ್ಯರ್ಥಿಗಳು ಹಾಗೂ ದ್ವಿತೀಯ ಅಧಿವೇಶನ ಪರೀಕ್ಷೆಯನ್ನು 6391 ಅಭ್ಯರ್ಥಿಗಳು, ಒಟ್ಟಾರೆ 8550 ಅಭ್ಯರ್ಥಿಗಳು ಟಿ.ಇ.ಟಿ ಪರೀಕ್ಷೆ ಬರೆಯಲಿದ್ದಾರೆ ಎಂದು ಸಭೆಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಪ್ರವಾಸೋದ್ಯಮ, ಖಜಾನೆ ಇಲಾಖೆ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.
ಪರೀಕ್ಷಾ ಕೇಂದ್ರಗಳ ವಿವರ:
ಗದಗ ಸರ್ಕಾರಿ ಪ.ಪೂ ಕಾಲೇಜು, ಮಹಾವೀರ ಜೈನ್ ಪ್ರೈಮರಿ/ಹೈಸ್ಕೂಲ್, ಬಸವೇಶ್ವರ ಹೈಸ್ಕೂಲ್, ಸಿಡಿಓ ಜೈನ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಜೆಸಿ ಹೈಸ್ಕೂಲ್, ಜಿಡಿ ಶಹಾ ಲಾಯನ್ಸ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಸನ್ಮಾರ್ಗ ಪಿಯೂನಿವರ್ಸಿಟಿ ಸೈನ್ಸ್ ಮತ್ತು ಕಾಮರ್ಸ್ ಕಾಲೇಜು, ಗುರುಬಸವ ಸಿಬಿಎಸ್‌ಇ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ತೋಂಟದಾರ್ಯ ಕಾಲೇಜ್ ಆಫ್ ಇಂಜಿನಿಯರಿಂಗ್, ಎಸ್.ಟಿ.ಎಸ್.ಕೆ.ಕೆ ಪಾಲಿಟೆಕ್ನಿಕ್, ಕೆಎಲ್‌ಇ ಸೊಸೈಟಿ ಜೆ.ಟಿ.ಪಿ.ಯು. ಕಾಲೇಜು, ಕೆ.ಎಲ್.ಇ ಆರ್ಟ್ಸ್ ಮತ್ತು ಕಾಮರ್ಸ್ ಪಿಯು ಕಾಲೇಜು, ಕೆಎಲ್‌ಇ ಸಿ.ಬಿ.ಎಸ್.ಇ ಸೇಂಟ್ ಜಾನ್ ಹೈಸ್ಕೂಲ್ ಬೆಟಗೇರಿ–ಗದಗ, ಲೋಯಲಾ ಹೈಸ್ಕೂಲ್, ಎಎಸ್‌ಎಸ್ ಕಾಮರ್ಸ್ ಕಾಲೇಜು ಬೆಟಗೇರಿ, ಜ. ತೋಂಟದಾರ್ಯ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ಜೆಟಿವಿಪಿಎಸ್ ಬಸವೇಶ್ವರ ಆರ್ಟ್ಸ್ ಕಾಮರ್ಸ್ ಮತ್ತು ಸೈನ್ಸ್ ಕಾಲೇಜು, ಎಚ್.ಸಿ.ಇ.ಎಸ್ ಪಿ.ಯು ಕಾಲೇಜು, ಬಿಪಿನ್ ಚಿಕ್ಕಟ್ಟಿ ಪಿಯು ಸೈನ್ಸ್ ಕಾಲೇಜು, ಮೈಲಾರಪ್ಪ ಮೆಣಸಗಿ ಹೈಸ್ಕೂಲ್, ಬ್ರೈಟ್ ಹಾರಿಜಾನ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್, ವಿಡಿಎಸ್‌ಟಿ ಬಾಯ್ಸ್ ಹೈಸ್ಕೂಲ್, ವಿಡಿಎಸ್ ಶ್ರೀಮತಿ ಎಸ್.ಪಿ. ಹುಯಿಲಗೋಳ ಗರ್ಲ್ಸ್ ಹೈಸ್ಕೂಲ್, ಸಿ.ಎಸ್. ಪಾಟೀಲ ಬಾಯ್ಸ್ ಸ್ಕೂಲ್, ಸಿ.ಎಸ್. ಪಾಟೀಲ ಗರ್ಲ್ಸ್ ಸ್ಕೂಲ್, ಗವರ್ನಮೆಂಟ್ ಫಸ್ಟ್ ಗ್ರೇಡ್ ಕಾಲೇಜು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಮಾತನಾಡಿ, ಪರೀಕ್ಷೆಯಲ್ಲಿ ಸಮಯ ಪರಿಪಾಲನೆ ಅತ್ಯಾವಶ್ಯಕವಾಗಿದ್ದು, ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗೋಡೆ ಗಡಿಯಾರಗಳು ಇರುವಂತೆ ನೋಡಿಕೊಳ್ಳಬೇಕು. ತುರ್ತು ವೈದ್ಯಕೀಯ ಸೇವೆ ಅಗತ್ಯವಿದ್ದಲ್ಲಿ ಆರೋಗ್ಯ ಇಲಾಖೆಯವರು ಈ ಕುರಿತು ಕ್ರಮ ವಹಿಸಬೇಕು. ಮಾರ್ಗಾಧಿಕಾರಿಗಳು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸ್ಥಳೀಯ ಜಾಗೃತ ದಳದ ಅಧಿಕಾರಿಗಳು ಸಮರ್ಪಕವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು.



