ಜೈಪುರ:- ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಜೈಪುರದಲ್ಲಿ ಜರುಗಿದೆ.
ಜಸ್ಟ್ 10 ರೂ.ಗಾಗಿ ಈ ಹಲ್ಲೆ ನಡೆದಿರುವುದಾಗಿ ವರದಿ ಆಗಿದೆ. ಹಲ್ಲೆಗೊಳಗಾದ ನಿವೃತ್ತ ಅಧಿಕಾರಿಯನ್ನು ಆರ್.ಎಲ್. ಮೀನ ಎಂದು ಗುರುತಿಸಲಾಗಿದೆ. ಇವರು ಆಗ್ರಾ ರಸ್ತೆಯ ಕನೋಟಾ ಬಸ್ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ಕಂಡಕ್ಟರ್ ನಿಲ್ದಾಣ ಬಂದಿದೆ ಎಂದು ತಿಳಿಸಿಲ್ಲ. ನಂತರ ಬಸ್ ನೈಲಾದಲ್ಲಿ ಮುಂದಿನ ನಿಲ್ದಾಣ ತಲುಪಿತು. ಹೀಗಾಗಿ ಮುಂದಿನ ನಿಲ್ದಾಣಕ್ಕೆ ಹೆಚ್ಚುವರಿ 10 ರೂ. ಪಾವತಿಸಿ ಎಂದು ಕಂಡಕ್ಟರ್ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ.
ಶುಕ್ರವಾರ ಈ ಘಟನೆ ನಡೆದಿದ್ದು, ಆ ಘಟನೆಯ ವೀಡಿಯೋ ವೈರಲ್ ಆಗಿದೆ. ಮುಂದಿನ ನಿಲ್ದಾಣದವರೆಗೆ ಪ್ರಯಾಣಕ್ಕೆ 10 ರೂ. ಹೆಚ್ಚುವರಿ ಶುಲ್ಕ ಪಾವತಿಸಲು ಕಂಡಕ್ಟರ್ ನಿವೃತ್ತ IAS ಅಧಿಕಾರಿ ಬಳಿ ಕೇಳಿದ್ದರು. ಈ ವೇಳೆ ಹೆಚ್ಚುವರಿ ಪ್ರಯಾಣ ದರ ನೀಡಲು ನಿರಾಕರಿಸಿದ್ದಕ್ಕೆ, ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.