ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದ್ದು, ಈ ಬಾರಿ `ಲಕ್ಕುಂಡಿಯ ಶಿಲ್ಪಕಲೆಯ ತೊಟ್ಟಿಲು’ ವಿಷಯಾಧಾರಿತ ಸ್ತಬ್ಧಚಿತ್ರವು ಅತ್ಯಾಕರ್ಷಣೀಯವಾಗಿದ್ದು, ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿರುವ ರಾಜ್ಯದ ಸ್ತಬ್ಧಚಿತ್ರವು ಪ್ರಶಸ್ತಿ ಪಡೆಯುವ ವಿಶ್ವಾಸವಿದೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ ನಿಂಬಾಳ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ರಾಜ್ಯದಿಂದ ಭಾಗವಹಿಸಲಿರುವ ಸ್ತಬ್ಧಚಿತ್ರವು ಗದಗಿನ ಲಕ್ಕುಂಡಿಯಲ್ಲಿರುವ ಮಂದಿರಕ್ಕೆ ಹೋಲುವಂತಿರುವ ಸ್ತಬ್ಧಚಿತ್ರವನ್ನು ಅಂತಾರಾರಾಷ್ಟ್ರೀಯ ಕಲಾವಿದ ಶಶಿಧರ ಅಡಪ ವಿನ್ಯಾಸಗೊಳಿಸಿದ್ದು, ದೆಹಲಿಯ ರಾಷ್ಟ್ರೀಯ ರಂಗಶಾಲಾ ಕ್ಯಾಂಪ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ರಾಜ್ಯದ 50ಕ್ಕೂ ಹೆಚ್ಚು ಜನ ಕಲಾವಿದರು, ಕುಶಲಕರ್ಮಿಗಳು ಮೈಕೊರೆಯುವ ಚಳಿಯಲ್ಲಿ ಸ್ತಬ್ಧಚಿತ್ರವನ್ನು ನಿರ್ಮಿಸಿದ್ದಾರೆ.
ಜ.23ರ ಗುರುವಾರ ನವದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ನಡೆದ ಸ್ತಬ್ಧಚಿತ್ರದ ಪೂರ್ವಾಭ್ಯಾಸದಲ್ಲಿ ರಾಜ್ಯದ ಲಕ್ಕುಂಡಿ ಶಿಲ್ಪಕಲೆಯ ತೊಟ್ಟಿಲು ಸ್ತಬ್ಧಚಿತ್ರಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಕರ್ತವ್ಯಪಥದಲ್ಲಿ ಸೇರಿದ ಜನರಿಂದ ನಿರೀಕ್ಷೆಗೂ ಮೀರಿ ಬಂದ ಪ್ರತಿಕ್ರಿಯೆಗೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ದೊರೆಯಲಿದೆ ಎಂಬ ವಿಶ್ವಾಸವನ್ನು ಆಯುಕ್ತರಾದ ಹೇಂಮಂತ್ ನಿಂಬಾಳ್ಕರ್ ವ್ಯಕ್ತಪಡಿಸಿದರು.
ಕರ್ತವ್ಯ ಪಥದಲ್ಲಿ ಸಾಗಿದ ಸ್ತಬ್ದಚಿತ್ರಕ್ಕೆ ಕನ್ನಡ ಸಾಹಿತ್ಯ ಇರುವ `ಶಿಲ್ಪಕಲೆಯ ತೊಟ್ಟಿಲು ನಮ್ಮ ಗದುಗಿನ ಲಕ್ಕುಂಡಿ’ ಎಂಬ ಹಾಡಿಗೆ ಹೆಸರಾಂತ ಕಲಾವಿದ ಪ್ರವೀಣ ಡಿ.ರಾವ್ ಸಂಗೀತ ಸಂಯೋಜನೆಯ ನಿನಾದಕ್ಕೆ ಗದಗ, ಬೆಂಗಳೂರು, ಮೈಸೂರು ಹಾಗೂ ಧಾರವಾಡದಿಂದ ಆಗಮಿಸಿದ ಸ್ತಬ್ಧಚಿತ್ರದ ಕಲಾವಿದರು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿ ಹೆಚ್ಚಿನ ಮೆರಗು ತಂದಿದ್ದಲ್ಲದಲೇ ಅಲ್ಲಿ ಸೇರಿದವರನ್ನು ರೋಮಾಂಚನಗೊಳಿಸಿತು.
ಕರ್ನಾಟಕದ ಗದಗ ಜಿಲ್ಲೆಯಲ್ಲಿರುವ ಲಕ್ಕುಂಡಿಯನ್ನು ಅದರ ಅದ್ಭುತ ಕಲ್ಲಿನ ವಾಸ್ತುಶಿಲ್ಪಕ್ಕಾಗಿ ‘ಶಿಲ್ಪಕಲೆಯ ತೊಟ್ಟಿಲು’ ಎಂದು ಕರೆಯಲಾಗುತ್ತದೆ. ಇಲ್ಲಿನ ಸುಂದರವಾದ ದೇವಾಲಯಗಳು, ಮೆಟ್ಟಿಲು ಬಾವಿಗಳು ಮತ್ತು ಚಾಲುಕ್ಯ ರಾಜವಂಶದ ಶಾಸನಗಳಿಗೆ ನೆಲೆಯಾಗಿದೆ. ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿರುವುದರ ಜೊತೆಗೆ, ಕ್ರಿ.ಶ 10ರಿಂದ 12ನೇ ಶತಮಾನದ ನಡುವೆ ಲಕ್ಕುಂಡಿ ಒಂದು ದೊಡ್ಡ ವಾಣಿಜ್ಯ ಕೇಂದ್ರವಾಗಿತ್ತು. ಈ ನಗರವು ಹಲವಾರು ರಾಜವಂಶಗಳಿಂದ ಆಳಲ್ಪಟ್ಟಿತ್ತಾದರೂ ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಚಾಲುಕ್ಯರ ರಾಜವಂಶ.
ಲಕ್ಕುAಡಿಯು ಪ್ರಾಚೀನಾನ್ವೇಷಕರು ಮತ್ತು ವಾಸ್ತುಶಿಲ್ಪ ಪ್ರಿಯರ ಸ್ವರ್ಗವಾಗಿದೆ. ಇದು 50 ದೇವಾಲಯಗಳನ್ನು ಹೊಂದಿದ್ದು, ಅವುಗಳಲ್ಲಿ ಹೆಚ್ಚಿನವು ಶಿವನಿಗೆ ಸಮರ್ಪಿತವಾಗಿವೆ. 101 ಮೆಟ್ಟಿಲು ಬಾವಿಗಳು (ಕಲ್ಯಾಣಿ/ಪುಷ್ಕರಣಿ); ಮತ್ತು 29 ಶಾಸನಗಳು ಇಲ್ಲಿವೆ. ಇವುಗಳು ಕಲ್ಯಾಣಿ ಚಾಲುಕ್ಯರ ಕಲೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯ ಸಂಕೇತವಾಗಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿರ್ವಹಿಸುತ್ತಿರುವ ವಸ್ತುಸಂಗ್ರಹಾಲಯವು ಲಕ್ಕುಂಡಿಯ ಶ್ರೀಮಂತ ಶಿಲ್ಪಕಲೆಯನ್ನು ಪ್ರದರ್ಶಿಸುತ್ತಿದೆ.
ಸ್ತಬ್ಧಚಿತ್ರದ ಮುಂಭಾಗವು ಬ್ರಹ್ಮ ಜಿನಾಲಯ ದೇವಸ್ಥಾನದ ಬ್ರಹ್ಮನ ಪ್ರತಿಮೆಯನ್ನು ಹೊಂದಿದೆ. ಇದು ಲಕ್ಕುಂಡಿಯಲ್ಲಿರುವ ಅತ್ಯಂತ ಹಳೆಯ ಜೈನ ದೇವಾಲಯವಾಗಿದ್ದು, ಭಗವಾನ್ ಮಹಾವೀರನಿಗೆ ಸಮರ್ಪಿತವಾಗಿದೆ. ಅದರ ನಂತರ ಬ್ರಹ್ಮ ಜಿನಾಲಯ ದೇವಸ್ಥಾನದ ತೆರೆದ ಕಂಬದ ಮಂಟಪವಿದೆ. ಸ್ತಬ್ಧಚಿತ್ರದ ಮುಖ್ಯ ವಿಭಾಗವು ಭವ್ಯವಾದ ಮತ್ತು ಅಲಂಕೃತವಾದ ಕಾಶಿ ವಿಶ್ವೇಶ್ವರ ದೇವಸ್ಥಾನ ಮತ್ತು ಶಿವನಿಗೆ ಸಮರ್ಪಿತವಾದ ನನ್ನೇಶ್ವರ ದೇವಸ್ಥಾನವನ್ನು ಪ್ರದರ್ಶಿಸುತ್ತದೆ.