ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಆದಯ್ಯ ಸರ್ಕಲ್‌ಗೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗುರುವಾರ ಸಂಜೆ ಮುಸ್ಲಿಂ ಯುವಕರು ಹಸಿರು ಧ್ವಜವನ್ನು ಕಟ್ಟಿದ್ದು, ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ಹಸಿರು ಧ್ವಜ ಕಟ್ಟಿರುವುದನ್ನು ತೆರವುಗೊಳಿಸುವಂತೆ ಪುರಸಭೆ ಮತ್ತು ಪೊಲೀಸರಿಗೆ ಆಗ್ರಹಿಸಿದರು.
ಈದ್ ಮಿಲಾದ್ ಮೆರವಣಿಗೆ ಆದಯ್ಯ ಸರ್ಕಲ್ ಹತ್ತಿರ ಬರುತ್ತಿರುವಾಗ ಧ್ವಜದ ವಿಚಾರವಾಗಿ ಎರಡೂ ಕೋಮಿನ ಯುವಕರ ನಡುವೆ ಮಾತಿನ ಚಕಮಕಿ ನಡೆಯಿತು. ಕೂಡಲೇ ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ಪೊಲೀಸ್ ತಂಡ ಪರಿಸ್ಥಿತಿ ತಹಬದಿಗೆ ತಂದು ಎರಡೂ ಕೋಮಿನ ಹಿರಿಯರ ಮಧ್ಯಸ್ಥಿಕೆ, ಮಾತುಕತೆಯ ಮೂಲಕ ಧ್ವಜ ತೆರವುಗೊಳಿಸಲಾಯಿತು.
ಈ ವೇಳೆ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಅವರು ಯುವಕರಿಗೆ ಖಡಕ್ ಸೂಚನೆ ನೀಡಿ ಈಗಾಗಲೇ ಹಬ್ಬದ ಕಾರ್ಯಕ್ರಮಗಳು ಮುಗಿದಿವೆ. ಎಲ್ಲರೂ ಶಾಂತ ರೀತಿಯಿಂದ ಮನೆಗೆ ಮರಳಬೇಕು ಎಂದು ಗುಂಪು ಚದುರಿಸಿದರು.
ಈ ಘಟನೆಯ ಮಾಹಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಶನ್ ಜಗದೀಶ ಅವರಿಗೆ ತಲುಪುತ್ತಿದ್ದಂತೆಯೇ ಲಕ್ಷ್ಮೇಶ್ವರಕ್ಕೆ ದೌಡಾಯಿಸಿ ಘಟನೆಯ ಮಾಹಿತಿ ಪಡೆದುಕೊಂಡರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಧರ್ಮದ ಆಚರಣೆ, ಹಬ್ಬಗಳನ್ನು ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯಿಂದ ಆಚರಣೆ ಮಾಡಬೇಕು. ವಿನಾಕಾರಣ ದ್ವೇಷದ ವಾತಾವರಣ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.