ಹೈದರಾಬಾದ್: ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ಅಶ್ವರಾವ್‌ಪೇಟೆ ಪುರಸಭೆಯ ವಾರ್ಡ್ ಸಂಖ್ಯೆ 10ರಲ್ಲಿ ನಡೆದ ಚುನಾವಣೆ ವೇಳೆ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಹರಿಬಾಬು ಅವರು ಸೋಲಿನ ಭೀತಿಯಿಂದ ಮತದಾರರಿಗೆ ವಿತರಿಸಿದ್ದ ಕುಕ್ಕರ್ ಹಾಗೂ ನಗದು ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮತದಾರರಿಗೆ ಪ್ರಚಾರ ಸಮಯದಲ್ಲಿ ಗೃಹೋಪಯೋಗಿ ವಸ್ತುಗಳು, ಪ್ರೆಶರ್ ಕುಕ್ಕರ್ ಹಾಗೂ ನಗದು ಹಣ ವಿತರಿಸಿದ್ದಾಗಿ ಹೇಳಲಾಗುತ್ತಿದೆ. ಆದರೆ ಚುನಾವಣೆಯಲ್ಲಿ ಸೋಲಿನ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ, ವಿತರಿಸಿದ್ದ ವಸ್ತುಗಳನ್ನು ಹಿಂತಿರುಗಿಸಬೇಕು ಎಂದು ಕೇಳಿದರೆಂಬ ಮಾಹಿತಿ ಹೊರಬಿದ್ದಿದೆ.
ಈ ಬೆಳವಣಿಗೆಯಿಂದ ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ನೀಡಿದ್ದ ಕುಕ್ಕರ್‌ಗಳನ್ನು ಬೀದಿಗೆ ಎಸೆದು ಆಕ್ರೋಶ ಹೊರಹಾಕಿದ ಘಟನೆ ಸ್ಥಳೀಯವಾಗಿ ಉದ್ವಿಗ್ನತೆ ಸೃಷ್ಟಿಸಿದೆ. ಈ ಸಂಬಂಧದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಭ್ಯರ್ಥಿ ವಿರುದ್ಧ ದೂರು ದಾಖಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.



