ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ವೃತ್ತದಿಂದ ಸೋಮವಾರ ಪ್ರಾರಂಭವಾದ ಬೃಹತ್ ಪ್ರತಿಭಟನೆ ಮತ್ತು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ 3ನೇ ದಿನ ತಲುಪಿದೆ.
ಬುಧವಾರ ಗದಗ ಜಿಲ್ಲೆಯ 72 ತಾಂಡಾಗಳ ಪೈಕಿ ಅವರ ವೇಳಾಪಟ್ಟಿಯಂತೆ ಗದಗ ತಾಲೂಕಿನ ನಾಗಾವಿ ತಾಂಡಾ, ಮುಂಡರಗಿ ತಾಲೂಕಿನ ಶಿಂಗಟರಾಯನಕೆರೆ ತಾಂಡಾ, ಶಿರಹಟ್ಟಿ ತಾಲೂಕಿನ ದೇವಿಹಾಳ ತಾಂಡಾ, ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ, ಮುನಿಯನ್ ತಾಂಡಾ, ಗಜೇಂದ್ರಗಡ ತಾಲೂಕಿನ ಜನತಾಪ್ಲಾಟ್ ತಾಂಡಾ, ಗಜೇಂದ್ರಗಡ ತಾಂಡಾ ಹಾಗೂ ಹಾಲಭಾವಿ ತಾಂಡಾ ಸೇರಿದಂತೆ ಜಿಲ್ಲೆಯ ವಿವಿಧ ತಾಂಡಾಗಳ ಸಾವಿರಾರು ಜನರು ಆಗಮಿಸಿ ಧರಣಿಯಲ್ಲಿ ಪಾಲ್ಗೊಂಡರು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರೂ ತಾಂಡಾ ನಿಗಮದ ಮಾಜಿ ಅಧ್ಯಕ್ಷರೂ ಆದ ಬಸವರಾಜ ನಾಯ್ಕ, ಹಿಂದಿನ ಬಿಜೆಪಿ ಸರ್ಕಾರ ಕೊಲಂಬೊ ಸಮುದಾಯಗಳಿಗೆ ಶೇ. 4.5ರಷ್ಟು ಮೀಸಲಾತಿ ನೀಡಲು ಆದೇಶ ಮಾಡಿತ್ತು. ಅದನ್ನು ನಮ್ಮ ಜನಾಂಗ ಒಪ್ಪಿರಲಿಲ್ಲ. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ 63 ಸಮುದಾಯಗಳಿಗೆ ಕೇವಲ ಶೇ.5ರಷ್ಟು ನೀಡಿದ್ದು, ಬಂಜಾರ ಜನಾಂಗಕ್ಕೆ ದ್ರೋಹ ಮಾಡಿದೆ. ಈ ಸರ್ಕಾರಕ್ಕೆ ನಮ್ಮ ಸಮುದಾಯ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ನೀತಿಗಳಿಂದ ನಮ್ಮ ಸಮುದಾಯವನ್ನು 50 ವರ್ಷ ಹಿಂದಕ್ಕೆ ಒಯ್ಯಲು, ನಮ್ಮ ಹಳೆಯ ಕಸಬುಗಳಿಗೆ ಹಚ್ಚುವ ಕುತಂತ್ರ ಮಾಡುತ್ತಿದೆ. ಕೆಲ ಸಮುದಾಯಗಳಿಗೆ ಶೇ.10ರಿಂದ 12ರಷ್ಟು ಹೆಚ್ಚಳ ನೀಡಿರುವ ಹಿಂದಿನ ಮರ್ಮವನ್ನು ನಾಗಮೋಹನದಾಸ್ ಅವರು ಬಹಿರಂಗಪಡಿಸಬೇಕು. ಕೆಲವು ಸಮುದಾಯಗಳನ್ನು ಓಲೈಕೆ ಮಾಡುವ ಉದ್ದೇಶದಿಂದಲೇ ಈ ಒಳಮೀಸಲಾತಿಯನ್ನು ಜಾರಿಗೆ ತಂದಿದ್ದು, ಇಂತಹ ಅವೈಜ್ಞಾನಿಕ ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರಥಮ ಹೆಜ್ಜೆ ದಿನಪತ್ರಿಕೆಯ ಸಂಪಾದಕ ಮಂಜ್ಯಾ ನಾಯ್ಕ ಮಾತನಾಡಿ, ಆಯೋಗ ಸಿದ್ಧಪಡಿಸಿದ ಕೋಷ್ಟಕದ ಪ್ರಕಾರ, ‘ಡಿ’ ಗುಂಪಿನಲ್ಲಿ ಇರುವ ಲಂಬಾಣಿ ಹಾಗೂ ಇತರೆ ಸಮುದಾಯಗಳು 23 ಮಾನದಂಡಗಳಲ್ಲಿ ಕೇವಲ 6 ವಿಷಯಗಳಲ್ಲಿ ಮಾತ್ರ ತುಸು ಮುಂದಿದ್ದು, ಉಳಿದ 17 ವಿಷಯಗಳಲ್ಲಿ ‘ಸಿ’ ಗುಂಪಿಗಿಂತ ಹಿಂದುಳಿದಿವೆ. ಹೀಗಿರುವಾಗ ‘ಡಿ’ ಗುಂಪಿಗೆ ‘ಸಿ’ ಗುಂಪಿಗಿಂತ ಕಡಿಮೆ ಶೇಕಡಾವಾರು ಮೀಸಲಾತಿ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಪ್ರತಿಭಟನಾ ಧರಣಿಯಲ್ಲಿ ಸುರೇಶ್ ಬಳೂಟಗಿ, ಚಂದು ನಾಯ್ಕ, ಚಂದ್ರು ನಾಯ್ಕ, ಶಿವಪ್ಪ ನಾಯ್ಕ, ಪುರಪ್ಪ ನಾಯ್ಕ, ಶಿವು ನಾಯ್ಕ, ಕುಬೇರ ನಾಯ್ಕ, ಟಿಕೂ ನಾಯ್ಕ, ಐ.ಎಸ್. ಪೂಜಾರ, ಕುಬೇರಪ್ಪ ರಾಠೋಡ, ಶಿವಣ್ಣ ಲಮಾಣಿ, ಪರಮೇಶ ಲಮಾಣಿ, ಟಿ.ಡಿ. ಪೂಜಾರ, ಪರಮೇಶ ನಾಯ್ಕ, ಧನ್ನುರಾಮ ತಂಬೂರಿ, ಸುರೇಶ್ ಮಹಾರಾಜ, ತುಕಾರಾಮ ಲಮಾಣಿ, ಪರಶುರಾಮ ಚವ್ಹಾಣ, ವಿಠ್ಠಲ ತೋಟದ, ಮೋಹನ ಲಮಾಣಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.
“ಬಂಜಾರ ಸಮುದಾಯಕ್ಕೆ ಸರ್ಕಾರ ಘೋರ ಅನ್ಯಾಯ ಮಾಡಿದೆ. ಅವೈಜ್ಞಾನಿಕ ಒಳಮೀಸಲಾತಿಯ ವರ್ಗೀಕರಣವನ್ನು ಕೂಡಲೇ ಕೈಬಿಡಬೇಕು. ಸರ್ಕಾರ ಬಂಜಾರ ಸಮುದಾಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕು”
– ರವಿಕಾಂತ ಅಂಗಡಿ,
ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ
ರಾಜ್ಯ ಪ್ರಧಾನ ಕಾರ್ಯದರ್ಶಿ.