ಬೆಂಗಳೂರು: ಹಿಂದಿ ಭಾಷೆ ಕುರಿತ ರಾಜ್ಯ ಸರ್ಕಾರದ ನಿಲುವಿಗೆ ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದಿ ವಿಚಾರದಲ್ಲಿ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ತ್ರಿಭಾಷಾ ನೀತಿ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ಸರ್ಕಾರ ದ್ವಿಭಾಷಾ ನೀತಿಗೆ ಒತ್ತು ನೀಡುತ್ತಿದ್ದು, ಇಂಗ್ಲಿಷ್ ಬೇಕು ಆದರೆ ಹಿಂದಿ ಬೇಡ ಎಂಬ ನಿಲುವು ತಾಳಿದೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
ತ್ರಿಭಾಷಾ ನೀತಿಯಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಯಲೇಬೇಕು ಎಂಬುದಿಲ್ಲ. ಆದರೂ ಸರ್ಕಾರ ಈ ವಿಷಯದಲ್ಲಿ ಸಣ್ಣತನ ತೋರಿಸಿದೆ. ಇಂತಹ ನಿರ್ಧಾರಗಳಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಅಶ್ವತ್ಥ್ ನಾರಾಯಣ್ ಆಕ್ಷೇಪಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ಖರ್ಚು ಮಾಡಿದರೂ, ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ವಿಫಲವಾಗಿದೆ. ಹಿಂದಿಯನ್ನು ತೆಗೆದು ದೇಶದ ಏಕತೆ ಹೇಗೆ ಸಾಧಿಸುತ್ತಾರೆ? ದೇಶದ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಹಿಂದಿ ಅಗತ್ಯ ಎಂದು ಹೇಳಿದರು.
ಇನ್ನೊಂದೆಡೆ, ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಖ್ ತಪ್ಪೊಪ್ಪಿಕೊಂಡಿರುವ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್ ಮೊದಲು ಸಮರ್ಥನೆ ಮಾಡಲು ಪ್ರಯತ್ನಿಸಿತ್ತು. ಈಗ ಏನು ಹೇಳುತ್ತಾರೆ ಎಂಬುದು ನೋಡಬೇಕು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಓಲೈಕೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.



