ಬೆಂಗಳೂರು: ಸಾರಿಗೆ ಇಲಾಖೆಯನ್ನು ಆರ್ಥಿಕವಾಗಿ ಕುಗ್ಗಿಸಿದ ಕೀರ್ತಿಗೆ ಕಾಂಗ್ರೆಸ್ ಸರ್ಕಾರ ಪಾತ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿದ್ದ ಕರ್ನಾಟಕದ ಸಾರಿಗೆ ಇಲಾಖೆಯನ್ನು ಆರ್ಥಿಕವಾಗಿ ಕುಗ್ಗಿಸಿದ ಕೀರ್ತಿಗೆ ಕಾಂಗ್ರೆಸ್ ಸರ್ಕಾರ ಪಾತ್ರವಾಗಿದೆ. ಇಲಾಖೆಯ ಅಧೀನದಲ್ಲಿರುವ ನಾಲ್ಕು ನಿಗಮಗಳ ಬಾಕಿ ಮೊತ್ತ 6,468 ಕೋಟಿ ರೂ.ಗೂ ಹೆಚ್ಚಿದ್ದು, ತೀವ್ರ ಆರ್ಥಿಕ ನಷ್ಟದಲ್ಲಿ ಮುಳುಗಿವೆ ಎಂದು ಹೇಳಿದರು.
ಇನ್ನೂ ಕಳೆದ ವೇತನ ಪರಿಷ್ಕರಣೆಯಾಗಿ 38 ತಿಂಗಳು ಕಳೆದಿದ್ದರೂ, ಬಾಕಿ ಪಾವತಿ ಹಾಗೆಯೇ ಉಳಿದಿದೆ. ಶಕ್ತಿ ಯೋಜನೆಯು ಈ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಿದೆ, ಇಲಾಖೆಯನ್ನು ದಿವಾಳಿಯ ಅಂಚಿಗೆ ದೂಡಿದೆ. ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಮತ್ತು ನೌಕರರ ಬಾಕಿ ಮೊತ್ತ ಪಾವತಿಯನ್ನು ಇತ್ಯರ್ಥಪಡಿಸಲು ಸರ್ಕಾರ ವಿಫಲವಾದರೆ ವ್ಯಾಪಕ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.