ಬೆಳಗಾವಿ: ಬಾಣಂತಿಯರ ಸಾವಿನ ಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಾಣಂತಿಯರು, ನವಜಾತ ಶಿಶುಗಳ ಸಾವಿನ ವಿಷಯದಲ್ಲಿ ರಾಜ್ಯಾದ್ಯಂತ ಗೊಂದಲದ ವಾತಾವರಣ ಇದೆ.
ಆಸ್ಪತ್ರೆಗಳು ಶವಾಗಾರವಾಗುವ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಈ ಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಟೀಕಿಸಿದ್ದಾರೆ.ಕಾಂಗ್ರೆಸ್ಸಿಗರು ಭ್ರಷ್ಟಾಚಾರ ಮಾಡುವ ಕಡೆ ಗಮನ ಕೊಡುತ್ತಿದ್ದು, ಆಸ್ಪತ್ರೆಗಳ ಮೇಲೆ ನಿಯಂತ್ರಣ ಇಲ್ಲವಾಗಿದೆ.
ಔಷಧಿ ಕೊಂಡುಕೊಳ್ಳುವಾಗ ಬ್ಲಾಕ್ ಮಾಡಿದ ಕಳಪೆ ಔಷಧಿಗಳನ್ನು ಖರೀದಿಸಿದ್ದಾರೆ. ಅವುಗಳನ್ನು ಬಳಸಿದ್ದರಿಂದ ಅನೇಕ ಕಡೆ ಈ ರೀತಿಯ ದಾರುಣ ಘಟನೆಗಳು ನಡೆದಿವೆ. ಇದೇ ಕಾರಣಕ್ಕೆ ರಾಜ್ಯಾಧ್ಯಕ್ಷ ವಿಜಯೇಂದ್ರ, ಡಾ.ಅಶ್ವತ್ಥನಾರಾಯಣ್, ಶಶಿಕಲಾ ಜೊಲ್ಲೆ, ಹೇಮಲತಾ ನಾಯಕ್ ಸೇರಿ ನಾವೆಲ್ಲ ಇಲ್ಲಿಗೆ ಭೇಟಿ ಕೊಟ್ಟಿದ್ದೇವೆ. ವಸ್ತುಸ್ಥಿತಿಯನ್ನು ವೈದ್ಯರಿಂದ ತಿಳಿದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.