ಕಾಂಗ್ರೆಸ್ ಸರ್ಕಾರದ ಬೊಕ್ಕಸ ಬರಿದಾಗಿದೆ : ಬಸವರಾಜ ಬೊಮ್ಮಾಯಿ

0
bommayi
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತಕ್ಕೂ ಅವರ ಅನುಭವಕ್ಕೂ ಬಹಳ ವ್ಯತ್ಯಾಸವಿದೆ. ಈ ಹತ್ತು ತಿಂಗಳಿನಲ್ಲಿ ಸಿದ್ದರಾಮಯ್ಯನವರ ಕೆಟ್ಟ ಆಡಳಿತ ಹೇಗಿದೆ ಎನ್ನುವುದು ಜನತೆಗೆ ಗೊತ್ತಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರೊಡನೆ ಬಹಿರಂಗ ಪ್ರಚಾರ ಸಭೆ ನಡೆಸಿ ಮತದಾರರಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಇಲಾಖೆಯಲ್ಲಿಯೂ ಒಂದು ಸಣ್ಣ ಕೆಲಸವೂ ಕೂಡ ಆಗಿಲ್ಲ. ಗ್ರಾಮೀಣ ಅಭಿವೃದ್ಧಿಯಲ್ಲಿ ಕೆಲಸ ಆಗಿಲ್ಲ. ಜನರ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ. ಯಾವುದೇ ಇಲಾಖೆಯಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಸರಿಯಾದ ಹಣಕಾಸಿನ ವ್ಯವಸ್ಥೆ ಮಾಡಿಲ್ಲ. ಸರಿಯಾದ ವ್ಯವಸ್ಥೆ ಮಾಡದೆಯೇ ಕಾಂಗ್ರೆಸ್‌ನವರು ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದರು. ಆದರೆ, ಇದ್ದ ಹಣಕಾಸಿಗೆ ಕೈ ಹಾಕಿ ಗ್ಯಾರಂಟಿ ಕೊಡುತ್ತಿದ್ದಾರೆ. ಇವರ ಖಜಾನೆಯ ಬೊಕ್ಕಸ ಬರಿದಾಗಿದೆ ಎಂದರು.

ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಿಟ್ಟಿದ್ದ 11300 ಕೋಟಿ ರೂ ಹಣವನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದಾರೆ. ಎಸ್‌ಸಿ/ಎಸ್‌ಟಿ ಜನಾಂಗಗಳಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಗಂಗಾ ಕಲ್ಯಾಣ ಯೋಜನೆಯ ಲಾಭ ಸಿಗುತ್ತಿಲ್ಲ. ಇನ್ನು ರೈತರ ಬಗ್ಗೆಯಂತೂ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲಿ ತಾವು ಸಿಎಂ ಆಗಿದ್ದಾಗ, ಒಂದೇ ತಿಂಗಳಿನಲ್ಲಿ ರೈತರಿಗೆ ಬೆಳೆ ಪರಿಹಾರ ಕೊಟ್ಟಿದ್ದೆವು.

17 ಲಕ್ಷ ರೈತರಿಗೆ ಪರಿಹಾರ ಕೊಟ್ಟೆವು. ಆದರೆ, ರೈತರ ಕೆಲಸ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಮನಸಿಲ್ಲ.
ರೈತರನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಆದರೆ, ಇವರೆಲ್ಲ ತಮ್ಮ ಹಾಗೂ ತಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಬರಿಯ ಭಾಷಣ ಮಾಡುತ್ತಿದ್ದಾರೆ. ಎಲ್ಲಾ ಜನಗಿರೂ ಸರಿಯಾದ ಗ್ಯಾರಂಟಿ ಮುಟ್ಟಿಲ್ಲ. ರಾಜ್ಯಕ್ಕೆ ಅಕ್ಕಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಿಂದ ಕೊಟ್ಟಿದ್ದಾರೆ ಎಂದರು.

ಈ ಸರ್ಕಾರದಲ್ಲಿ ಜನರ ಕೆಲಸ ಮಾಡಲು ಸಮಯವೇ ಇಲ್ಲ. ಆದರೆ, ಇವರು ಜನರಿಗೆ ಕೆಲಸ ಮಾಡುವುದಕ್ಕಿಂತ ತಮ್ಮ ತಮ್ಮ ಖುರ್ಚಿಯನ್ನು ಭದ್ರಗೊಳಿಸಿಕೊಳ್ಳಲು ಮಾತ್ರ ಓಡಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆಲವು ಮಂತ್ರಿಗಳಿಗೆ ಲೋಕಸಭಾ ಚುನಾವಣೆ ನಿಲ್ಲಿ ಎಂದು ಹೇಳಿದ್ದಾರೆ. ಏಕೆಂದರೆ, 5 ಗ್ಯಾರಂಟಿಗಳ ಜೊತೆ ಅಭ್ಯರ್ಥಿಗಳನ್ನು ಸೋಲಿಸುವ ಗ್ಯಾರೆಂಟಿಯೂ ಸಿದ್ದರಾಮಯ್ಯ ಸರ್ಕಾರದ್ದಾಗಿದೆ.

ಮತ್ತೆ ಮೋದಿ ಸರ್ಕಾರ ಬಂದ ತಕ್ಷಣ ಈ ಸರ್ಕಾರದ ದಿನಗಣನೆ ಪ್ರಾರಂಭವಾಗಲಿದೆ. ಇನ್ನು 6 ತಿಂಗಳು ಅಥವಾ 1 ವರ್ಷದೊಳಗೆ ಕರ್ನಾಟಕ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬಂದೇ ಬರುತ್ತದೆ. ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಬರಗಾಲ ಗ್ಯಾರಂಟಿ, ಭ್ರಷ್ಟಾಚಾರ ಗ್ಯಾರಂಟಿ, ಜೀರೋ ಅಭಿವೃದ್ಧಿ ಗ್ಯಾರಂಟಿ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಕೂಡ ಗ್ಯಾರಂಟಿ ಎಂದು ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.


Spread the love

LEAVE A REPLY

Please enter your comment!
Please enter your name here