ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನಾ ಪ್ರಕ್ರಿಯೆ ಕರಡು ಸಿದ್ಧತಾ ಸಮಿತಿಯ ಅಧ್ಯಕ್ಷರೂ ಆಗಿದ್ದ ವೇಳೆಯಲ್ಲಿಯೇ `ಕಾಂಗ್ರೆಸ್ ಒಂದು ಸುಡುವ ಮನೆ ಎಚ್ಚರಿಕೆ’ ಎಂದು ಅವರು ನೀಡಿದ ಹೇಳಿಕೆ ಅಕ್ಷರಶಃ ಸತ್ಯವಾಗಿದೆ. ಏಕೆಂದರೆ ಕಾಂಗ್ರೆಸ್ ಅವರನ್ನು ಅಷ್ಟೊಂದು ಕೆಟ್ಟದಾಗಿ ನಡೆಸಿಕೊಂಡು ಸಾಕಷ್ಟು ನೋವು, ಅವಮಾನವನ್ನು ನೀಡಿತ್ತು ಎಂದು ಮಾಜಿ ಶಿಕ್ಷಣ ಸಚಿವ ಎನ್. ಮಹೇಶ ಹೇಳಿದರು.
ಅವರು ಶನಿವಾರ ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ವತಿಯಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತಿ ಪ್ರಯುಕ್ತ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
1948ರಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದು, ಇದು ಆತುರದ ಅಥವಾ ನಿರ್ಲಕ್ಷ್ಯದ ಹೇಳಿಕೆಯಲ್ಲ. ಇದು ಪ್ರಜ್ಞಾಪೂರ್ವಕ, ಚಿಂತನೆಯಿಂದ ನೀಡಿದ ಹೇಳಿಕೆ. ಸಂವಿಧಾನವನ್ನು ತಿದ್ದಿ ಅವಮಾನಿಸಿದ್ದು ಕಾಂಗ್ರೆಸ್‌ನವರೇ ಹೊರತು ಬಿಜೆಪಿಯವರಲ್ಲ. ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಿದ್ದು ಕಾಂಗ್ರೆಸ್‌ನವರು. ನರೇಂದ್ರ ಮೋದಿಯವರು ಹಿಂದುಳಿದ ಪರ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಪರ ಒಟ್ಟು 22 ತಿದ್ದುಪಡಿಗಳನ್ನು ಮಾಡಿದ್ದಾರೆ. ಕಾಂಗ್ರೆಸ್‌ನವರು ಸಂವಿಧಾನವನ್ನು ತಿದ್ದುಪಡಿ ಮಾಡಿದರೂ ಸಹ ಇದರಲ್ಲಿ ಪರಿಶಿಷ್ಟ ಜಾತಿ/ಪಂಗಡವರಿಗೆ ಏನೂ ಮಾಡಿಲ್ಲ. ಇದರಿಂದ ಕಾಂಗ್ರೆಸ್ ಸಂವಿಧಾನವನ್ನು ತಿದ್ದಿ ಡಾ.ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಆರೋಪಿಸಿದರು.
ಹಿರಿಯ ಮುಖಂಡ ಡಾ. ಕ್ರಾಂತಿಕಿರಣ ಮತ್ತು ಪರಿವಾರದ ಪ್ರಮುಖ ವಾದಿರಾಜ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯನಂತರವೂ ಅಂಬೇಡ್ಕರರಿಗೆ ಮತ್ತು ದಲಿತರಿಗೆ ನಿರಂತರವಾಗಿ ಮೋಸ ಮಾಡುತ್ತಾ ಬರುತ್ತಿದೆ. ದಲಿತರನ್ನು ಅವತ್ತು ಮತ ಬ್ಯಾಂಕ್ ಆಗಿ ಬಳಸಿಕೊಂಡು, ಅದೇ ಚಾಳಿಯನ್ನು ಇವತ್ತಿಗೂ ಮುಂದುವರೆಸಿದೆ ಎಂದು ಆರೋಪಿಸಿದರು.
ಶಾಸಕ ಡಾ. ಚಂದ್ರು ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಹಿರಿಯ ಮುಖಂಡರಾದ ರವಿ ದಂಡಿನ, ಬಿಜೆಪಿ ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಬಸವರಾಜ ಚಕ್ರಸಾಲಿ, ಗಂಗಾಧರ ಮೆಣಸಿನಕಾಯಿ, ಮೋಹನ್ ಗುತ್ತೆಮ್ಮನವರ, ಗಿರೀಶ ಚೌರಡ್ಡಿ, ಜಾನು ಲಮಾಣಿ ಮುಂತಾದವರಿದ್ದರು. ಮಂಡಳ ಕಾರ್ಯದರ್ಶಿ ಅನಿಲ ಮುಳಗುಂದ ಸ್ವಾಗತಿಸಿದರು. ಪ್ರವೀಣ ಪಾಟೀಲ ನಿರೂಪಿಸಿದರು.
ಕಾಂಗ್ರೆಸ್ ಪಕ್ಷವು ತನ್ನ ನಾಯಕರಿಗೆ ಹಲವು ಬಾರಿ ಭಾರತರತ್ನ ನೀಡಿದೆ. ಆದರೆ ಬಾಬಾ ಸಾಹೇಬರಿಗೆ ನೀಡಲಾಗಲಿಲ್ಲ. ಏಕೆಂದರೆ ಇವರ ಮೇಲೆ ಕಾಂಗ್ರೆಸ್‌ಗೆ ಯಾವುದೇ ಪ್ರೀತಿ, ಗೌರವ ಇರಲಿಲ್ಲ. ಕಾಂಗ್ರೆಸ್ ಸರಕಾರವು ಮೊದಲಿನಿಂದಲೂ ಜನರಿಗೆ ಸುಳ್ಳು ಹೇಳುತ್ತಾ ಬಂದಿದೆ. ಜೈ ಭೀಮ್ ಎಂದು ಹೇಳುವ ಹಕ್ಕು ಕಾಂಗ್ರೆಸ್‌ನವರಿಗೆ ಇಲ್ಲ. ಭಾರತೀಯ ಜನತಾ ಪಾರ್ಟಿ ಡಾ. ಬಿ.ಆರ್. ಅಂಬೇಡ್ಕರರ ವಿಚಾರ-ಹೋರಾಟಕ್ಕೆ ಮನ್ನಣೆ ನೀಡುವ ಉದ್ದೇಶದಿಂದ ಎಪ್ರಿಲ್ 14ರಿಂದ ಎ.25ರವರೆಗೆ ವಿಚಾರಗೋಷ್ಠಿ ಯಾತ್ರೆ ಕೈಗೊಂಡಿದೆ ಎಂದು ಎನ್. ಮಹೇಶ ಹೇಳಿದರು.