ವಿಜಯಸಾಕ್ಷಿ ಸುದ್ದಿ, ಗದಗ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ದೇಶದ ರೈತರ 72 ಸಾವಿರ ಕೋಟಿ ರೂ ಸಾಲ ಮನ್ನಾ ಮಾಡಲಾಯಿತು. ಬಿಜೆಪಿ ಅವಧಿಯಲ್ಲಿ ಅದಾನಿ, ಅಂಬಾನಿಗಳು 6.50 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ. ರೈತರಿಗೆ ಆದ ಅನ್ಯಾಯ ಇದೇ ಅಲ್ಲವೇ ಎಂದು ಕಾನೂನು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಪ್ರಶ್ನಿಸಿದರು.
ಬುಧವಾರ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಏರ್ಪಡಿಸಿದ್ದ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಬಿಜೆಪಿ ದೇಶದಲ್ಲಿ ಸಂವಿಧಾನದ ತಿರುಚುವ ಪ್ರಯತ್ನವನ್ನು ಸದ್ದಿಲ್ಲದೆ ನಡೆಸಿದೆ. ಚುನಾವಣಾ ಬಾಂಡ್ ಮೂಲಕ ಬಿಜೆಪಿ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದರು.
ಜನರ ವಿಶ್ವಾಸಕ್ಕೆ ಕಾಂಗ್ರೆಸ್ ಎಂದೂ ದ್ರೋಹ ಬಗೆದಿಲ್ಲ. ಬಡವರ, ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗದವರ ಏಳ್ಗೆಗೆ ಕಾಂಗ್ರೆಸ್ ಸರ್ಕಾರ ಸದಾ ಬದ್ಧವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಬಲತೆ ಸೃಷ್ಟಿಯಾಗಿದೆ. ಬಡವರ ಆರ್ಥಿಕ ಗುಣಮಟ್ಟ ಹೆಚ್ಚಾಗುತ್ತಿದೆ ಎಂದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬಿಜೆಪಿ ರಾಜ್ಯದಲ್ಲಿ ಎಂದಿಗೂ ಸ್ವಂತ ಅಧಿಕಾರಕ್ಕೆ ಬರಲಿಲ್ಲ.
ದತ್ತು ಪುತ್ರರನ್ನು ಪಡೆದೇ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯವರಾಗಿದ್ದರೂ ಕೂಡ ಅಧಿಕಾರದಲ್ಲಿದ್ದಾಗ ಜಿಲ್ಲೆಗೆ ನೀರು ಪೂರೈಸುವ ಯೋಜನೆ ತರಲಾಗಿಲ್ಲ.
ಕಾಂಗ್ರೆಸ್ ಸರ್ಕಾರ ಮುಂಬರುವ ಒಂದು ವರ್ಷದಿಂದ ಹಾವೇರಿಗೆ ಸಂಪೂರ್ಣ ಕುಡಿಯುವ ನೀರು ಪೂರೈಕೆ ಮಾಡುತ್ತದೆ ಎಂದು ಭರವಸೆ ನೀಡುತ್ತೇನೆ. ಕಳೆದ 20 ವರ್ಷದಿಂದಲೂ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಈ ಕ್ಷೇತ್ರ ಪಡೆದಿದ್ದಾದರೂ ಏನು ಎಂದು ಪ್ರಶ್ನಿಸಿದರು.
ಶಾಸಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, 2004ರಿಂದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. 2014ರಲ್ಲಿಯೂ ಕಾಂಗ್ರೆಸ್ ಶಾಸಕರು ಹೆಚ್ಚಿದ್ದರು. ಆದರೆ, ಲೋಕಸಭೆಯಲ್ಲಿ ಕಾಂಗ್ರೆಸ್ ಸೋತಿತು. ಹಾಗಾಗಿ, ಪಕ್ಷ ಆದೇಶಿಸಿದಂತೆ ಕ್ಷೇತ್ರದಲ್ಲಿ ಕೆಲಸಮಾಡಿ ಅಭ್ಯರ್ಥಿಯ ಗೆಲುವಿಗೆ ಶ್ರಮೀಸಬೇಕು. ಗ್ಯಾರಂಟಿ ಯೋಜನೆಗಳನ್ನು ಘೋಷಿಸುವುದಷ್ಟೇ ಅಲ್ಲ, ಆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಸವಾಲಾಗಿರುತ್ತದೆ. ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದರಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ ಎಂದರು.
ಡಿ.ಆರ್. ಪಾಟೀಲ ಮಾತನಾಡಿ, ಗದಗ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣ ಇದೆ.
ಈ ಉತ್ತಮ ಸ್ಥಿತಿಯನ್ನು ಮತಗಳಾಗಿ ಪರಿವರ್ತನೆ ಮಾಡಬೇಕಿದೆ. ಈ ಸಭೆಯಲ್ಲಿ ಸೇರಿರುವ ಜನರನ್ನು ನೋಡಿ ಗೆಲುವು ನಮ್ಮದೇ ಎಂಬ ವಿಶ್ವಾಸ ಮೂಡುತ್ತಿದೆ ಎಂದರು.
ಪಕ್ಷದ ಪ್ರಮುಖರಾದ ಡಿ.ಆರ್. ಪಾಟೀಲ, ಸುಜಾತಾ ದೊಡ್ಡಮನಿ, ರಾಮಣ್ಣ ಲಮಾಣಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಜಿ.ಎಸ್. ಗಡ್ಡದೇವರಮಠ, ಎಲ್.ಡಿ. ಚಂದಾವರಿ, ಅಕ್ಬರ್‌ಸಾಬ ಬಬರ್ಚಿ,ಟಿ. ಈಶ್ವರ, ಮಿಥುನ ಪಾಟೀಲ, ಅಶೋಕ ಮಂದಾಲಿ, ಸಿದ್ದು ಪಾಟೀಲ, ವೀರಯ್ಯ ಸೋಮನಕಟ್ಟಿಮಠ ಇತರರು ಇದ್ದರು.
ಸಂವಿಧಾನ ಕಾಪಾಡಿಕೊಳ್ಳುವ, ಮೀಸಲಾತಿ ಉಳಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನ ರಕ್ಷಣೆ ಮಾಡಬೇಕಿದೆ. ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಕಾರ್ಡ್ಗಳನ್ನು ಮನೆ ಮನೆಗೆ ತಲುಪಿಸಿದ್ದೆವು. ಅದೇ ರೀತಿ ಗ್ಯಾರಂಟಿ ಯೋಜನೆಗಳನ್ನೂ ಮನೆ ಮನೆಗೆ ತಲುಪಿಸಿದ್ದೇವೆ. ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಇರುವ ವಿಶ್ವಾಸ ಬಹುದೊಡ್ಡದು. ಗ್ಯಾರಂಟಿ ಯೋಜನೆಗಳು ಮಾನವ ಹಕ್ಕುಗಳಾಗಬೇಕು ಎಂಬುದು ಕಾಂಗ್ರೆಸ್ ಉದ್ದೇಶವಾಗಿದೆ.
– ಎಚ್.ಕೆ ಪಾಟೀಲ, ಸಚಿವರು.
ವಿ.ಪ ಸದಸ್ಯ ಸಲೀಂ ಅಹಮ್ಮದ ಮಾತನಾಡಿ, ಸಮಾಜದ ಎಲ್ಲ ವರ್ಗಗಳ ಹಿತಾಸಕ್ತಿ ಕಾಯುವ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ. ಬಿಜೆಪಿ. ಸುಳ್ಳು ಹೇಳುವ ಪಕ್ಷವಾಗಿದೆ. ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಭ್ರಷ್ಟಾಚಾರ ಪಸರಿಸುತ್ತಿದೆ ಎಂದು ಆರೋಪಿಸಿದರಲ್ಲದೆ, ಬಜೆಟ್‌ನಲ್ಲಿ ಗ್ಯಾರಂಟಿಗೆ 58 ಸಾವಿರ ಕೋಟಿ ರೂ ಮೀಸಲಿಟ್ಟಿದ್ದೇವೆ. ದೇಶದ ಐಕ್ಯತೆಗೆ ಕಾಂಗ್ರೆಸ್ ಪಕ್ಷ ತ್ಯಾಗ, ಬಲಿದಾನ ನೀಡಿದೆ. ಅತ್ಯಂತ ಹೆಚ್ಚಿನ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.