ಬೆಳಗಾವಿ: ರಾಜ್ಯದ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಗಡಿಜಿಲ್ಲೆಯ ಮೂವರು ಪ್ರಮುಖ ನಾಯಕರಿಗೆ ಪ್ರತ್ಯೇಕ ಕ್ಷೇತ್ರಗಳಲ್ಲಿ ಗೆಲುವಿನ ಟಾಸ್ಕ್ ನೀಡಿದೆ.
ಬಾಗಲಕೋಟೆ ಕ್ಷೇತ್ರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ದಾವಣಗೆರೆ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಬಲಪಡಿಸಲು ಮಾಜಿ ಡಿಸಿಎಂ ಲಕ್ಷ್ಮಣ ಸವದಿಯನ್ನು ಸ್ಟಾರ್ ಪ್ರಚಾರಕರಾಗಿ ನೇಮಕ ಮಾಡಲಾಗಿದೆ.
ಈ ಮೂವರು ನಾಯಕರಿಗೆ ಸಂಘಟನಾ ಸಾಮರ್ಥ್ಯ ಹಾಗೂ ಕಠಿಣ ಚುನಾವಣಾ ಅನುಭವ ಇರುವುದರಿಂದ ಹೈಕಮಾಂಡ್ ಈ ತಂತ್ರ ರೂಪಿಸಿದೆ ಎನ್ನಲಾಗಿದೆ.
ಲಿಂಗಾಯತ ಹಾಗೂ ಅಹಿಂದ ಮತಬ್ಯಾಂಕ್ಗಳನ್ನು ಸಮರ್ಪಕವಾಗಿ ಬಳಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅಲೆ ಸೃಷ್ಟಿಸುವ ಗುರಿ ಇಟ್ಟುಕೊಂಡು ಕಾರ್ಯತಂತ್ರ ರೂಪಿಸಲಾಗುತ್ತಿದೆ.
ಈ ನಿಯೋಜನೆ ಕಾಂಗ್ರೆಸ್ ಪಕ್ಷದ ಉಪಚುನಾವಣಾ ಕಾರ್ಯತಂತ್ರದಲ್ಲಿ ಮಹತ್ವದ ತಿರುವಾಗಿದ್ದು, ಫಲಿತಾಂಶದ ಮೇಲೆ ಈ ನಾಯಕರ ಪಾತ್ರ ನಿರ್ಣಾಯಕವಾಗಲಿದೆ.



