ಬೆಂಗಳೂರು:- ಕಾಂಗ್ರೆಸ್ಸಿಗೆ ಯತೀಂದ್ರ ಹೈಕಮಾಂಡ್ ಆಗಿದ್ದಾರಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಯತೀಂದ್ರ ಸಿದ್ದರಾಮಯ್ಯ ಐದು ವರ್ಷ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಎಂದಿದ್ದಾರೆ. ರಾಹುಲ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಕಾಂಗ್ರೆಸ್ಸಿನ ಹೈಕಮಾಂಡೇ ಅಥವಾ ಯತೀಂದ್ರ ಸಿದ್ದರಾಮಯ್ಯ ಅವರೇ ಹೈಕಮಾಂಡ್ ಆಗಿದ್ದಾರಾ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ನಡೆಯುತ್ತಿದ್ದು, ಸದ್ಯದಲ್ಲಿ ಈ ಸಮಸ್ಯೆ ಬಗೆಹರಿಯುವುದಿಲ್ಲ. ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡುತ್ತೀರಿ? ಸಾಧ್ಯವಾದರೆ ಇದನ್ನು ಮುಂದೂಡಿ ಎಂದು ತಿಳಿಸಿದ್ದೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ನಾಡಿನ ಕೃಷಿಕರು, ರೈತರ, ಬಡವರ, ನೇಕಾರರ ಸಮಸ್ಯೆ ಸೇರಿ ಜ್ವಲಂತ ಸಮಸ್ಯೆಗಳ ಚರ್ಚೆ ಆಗಬೇಕೆಂದು ಮುಖ್ಯಮಂತ್ರಿಗಳಿಗೆ ಅಧಿವೇಶನ ಆರಂಭಕ್ಕೂ ಮೊದಲೇ ಗಮನ ಸೆಳೆದಿದ್ದೆ ಎಂದು ಹೇಳಿದರು.
ಮುಖ್ಯಮಂತ್ರಿ ವಿಷಯದಲ್ಲಿ ಪೈಪೋಟಿ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಹೇಳುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಬಂದಾಗ ಒಂದು ರೀತಿ ನಿಸ್ಸಹಾಯಕರಾಗಿ ಮಾತನಾಡಿದ್ದಾಗಿ ಗಮನ ಸೆಳೆದರು. ಇವರ ಗೊಂದಲದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



