ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿ ರೈತ ಮೋರ್ಚಾದಿಂದ ಶನಿವಾರ ನಗರದ ಕಾಲಕಾಲೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ರೈತರು ಹಗಲು-ರಾತ್ರಿ ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ಈ ಬಾರಿ ಮೆಕ್ಕೆಜೋಳ, ಈರುಳ್ಳಿ ಉತ್ಪಾದನೆಯಾಗಿದೆ. ಇದರಿಂದ ಸಾವಿರಾರು ಕೋಟಿ ಆದಾಯ ಸರ್ಕಾರಕ್ಕೆ ಬರುತ್ತದೆ. ಅದರಲ್ಲಿ ಪ್ರೋತ್ಸಾಹ ಧನ ಕೊಡುತ್ತಿಲ್ಲ. ಸರ್ಕಾರ ರೈತರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದೆ. ನಾವೇನು ಮಾಡಿದರೂ ನಡೆಯುತ್ತೆ ಎಂದು ಅವರು ಆಡಿದ್ದೇ ಆಟವಾಗಿದೆ. ರೈತರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಎಲ್ಲ ಪಕ್ಷಕ್ಕೆ ರೈತರು ಬೇಕು. ರೈತ ವಿರೋಧಿ ಸರ್ಕಾರ ಕಿತ್ತೆಸೆಯುವವರೆಗೆ ಹೋರಾಟ ನಿಲ್ಲದು. ಹಳ್ಳಿ ಹಳ್ಳಿಗೂ ಹೋರಾಟವನ್ನು ತೆಗೆದುಕೊಂಡು ಹೋಗುತ್ತೇವೆ. ಬೆಳಗಾವಿ ಅಧಿವೇಶನವನ್ನು ರೈತರಿಗಾಗಿ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಶಿವಾನಂದ ಮಠದ ಮಾತನಾಡಿ, ಕಾಂಗ್ರೆಸ್ ಸರ್ಕಾರ ರೈತ ವಿರೋಧಿ, ಜನವಿರೋಧಿಯಾಗಿದೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ದೂರಿದರು.
ಹೋರಾಟದಲ್ಲಿ ಕರಣ ಬಂಡಿ, ಉಮೇಶ್ ಮಲ್ಲಾಪುರ, ಬಾಲಾಜಿರಾವ್ ಭೋಸ್ಲೆ, ಮುತ್ತಣ್ಣ ಕಡಗದ, ಅಶೋಕ್ ನವಲಗುಂದ, ರಾಜೇಂದ್ರ ಘೋರ್ಪಡೆ, ಮಂಜುನಾಥ ಬುರಡಿ, ರೂಪಲೇಶ್ ರಾಠೋಡ್, ಬಿ.ಎಂ. ಸಜ್ಜನರ, ಅಂದಪ್ಪ ಅಂಗಡಿ, ಶಂಕರ, ಭಾಸ್ಕರ್ ರಾಯಬಾಗಿ, ಶಿವಕುಮಾರ ಜಾಧವ, ಚನ್ನು ಪಾಟೀಲ್ ಸೇರಿದಂತೆ ಯುವ ರೈತ ಮುಖಂಡರು, ಬಿಜೆಪಿ ಪಕ್ಷದ ಮುಖಂಡರು, ಹಾಗೂ ತಾಲೂಕಿನ ಗ್ರಾಮೀಣ ಪ್ರದೇಶದ ರೈತರು ಪಾಲ್ಗೊಂಡಿದ್ದರು.



