ದೊಡ್ಡಬಳ್ಳಾಪುರ: ಈ ಬಾರಿ ಕೇಂದ್ರ ಬಜೆಟ್‍ನಲ್ಲಿ 3 ಸಿಗಳಿವೆ. ಒಂದನೆಯದು ಕಂಟಿನ್ಯೂಯಿಟಿ, ಕಳೆದ ಬಜೆಟ್‍ನ ಮುಂದುವರಿಕೆ ಇದರಲ್ಲಿದೆ. ಯಾವ ಬೆಲೆಯೂ ಹೆಚ್ಚಾಗಿಲ್ಲ; ತೆರಿಗೆಯೂ ಹೆಚ್ಚು ಕಡಿಮೆ ಆಗಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಕಳೆದ ಬಾರಿ 12 ಲಕ್ಷಕ್ಕೆ ತೆರಿಗೆ ವಿನಾಯಿತಿ ನೀಡಿದ್ದರು. ಅದರಲ್ಲಿ ವ್ಯತ್ಯಾಸ ಮಾಡಿಲ್ಲ; ಜನರಿಗೆ ಸೌಲಭ್ಯ ಕೊಡಲು ಒತ್ತು ಕೊಟ್ಟಿದ್ದಾರೆ. 2ನೇ ಸಿ; ಕ್ರೆಡಿಬಿಲಿಟಿ. ಆ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದ್ದೇವೆ. 3ನೇ ಸಿ- ಕಮಿಟ್‍ಮೆಂಟ್. ನಾವು ನುಡಿದಂತೆ ನಡೆದಿದ್ದೇವೆ ಎಂದು ಸುಳ್ಳು ಹೇಳಿಲ್ಲ. ನಾವು ಬದ್ಧತೆಯನ್ನು ಪ್ರದರ್ಶಿಸಿದ್ದೇವೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷದ 3 ಸಿ. ಅಂದರೆ, ಕರಪ್ಶನ್ ಅಂದರೆ ಭ್ರಷ್ಟಾಚಾರ. ಅವರು ಭ್ರಷ್ಟಾಚಾರದಲ್ಲಿ ನಿಪುಣರು. ಮೋದಿಯವರ ಸರಕಾರ 12 ವರ್ಷ ಪೂರೈಸುತ್ತಿದ್ದು, ಈ 12 ವರ್ಷಗಳಲ್ಲಿ ಭ್ರಷ್ಟಾಚಾರದ ಆರೋಪಗಳಿಲ್ಲ. ಕಾಂಗ್ರೆಸ್ಸೆಂದರೆ ಕಮಿಷನ್; ಟೆಂಡರ್ ಹಾಕು ಕಮಿಷನ್ ಹೊಡಿ ಎಂಬ ನೀತಿ. ಅದಾದ ಮೇಲೆ ಕನ್ನಿಂಗ್, ಕಮ್ಯುನಲ್, ಕಾಸ್ಟಿಸಂ, ಓಲೈಕೆಗಳು ಎಂದು ಆಕ್ಷೇಪಿಸಿದರು.
ಈ ಸಾರಿಯ ಕೇಂದ್ರ ಬಜೆಟ್‍ನಲ್ಲಿ ಇಲ್ಲಿ ಯಾರನ್ನೂ ಓಲೈಕೆ ಮಾಡುವ ಕೆಲಸವನ್ನು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಾಡಿಲ್ಲ. ಅದು ಬಿಜೆಪಿಯ ನೀತಿ ಎಂದು ತಿಳಿಸಿದರು. ಕಾಂಗ್ರೆಸ್ ಬಜೆಟ್ ಇದಾಗಿದ್ದರೆ ತಾರತಮ್ಯ ಮತ್ತು ಓಲೈಕೆಗಳನ್ನು ಬಹಳಷ್ಟು ಕಾಣಬಹುದಾಗಿತ್ತು ಎಂದು ಟೀಕಿಸಿದರು.



