ಕೊಪ್ಪಳ: ಜಮೀರ್ ಎನ್ನುವ ‘420’ ಸಚಿವನನ್ನು ಇಟ್ಟುಕೊಂಡು ರೈತರನ್ನು ಕಾಂಗ್ರೆಸ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ದುರಾಡಳಿತದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ವಕ್ಫ್ ಮಸೂದೆ ದುರುಪಯೋಗ ಮಾಡಿಕೊಂಡ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕಾಂಗ್ರೆಸ್ ದುರಾಡಳಿತದ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿದೆ. ಈ ಸರ್ಕಾರ ಜಮೀರ್ ಎನ್ನುವ ‘420’ ಸಚಿವನನ್ನು ಇಟ್ಟುಕೊಂಡು ಎಲ್ಲಾ ಭೂಮಿ ವಶಪಡಿಸಿಕೊಳ್ಳಲು ತರಾತುರಿಯಲ್ಲಿ ಸಾವಿರಾರು ಎಕರೆಗೆ ವಕ್ಫ್ ಹೆಸರು ಸೇರಿಸಿದ್ದಾರೆ ಎಂದು ಕಿಡಿಕಾರಿದರು.
ಚುನಾವಣೆಯಲ್ಲಿ ಹೊಡೆತ ಬೀಳುವ ಭಯದಲ್ಲಿ ಸಿಎಂ ಅವರು ಮೌಖಿಕವಾಗಿ ನೋಟಿಸ್ ಹಿಂಪಡೆಯುವ ಹೇಳಿಕೆ ನೀಡಿದ್ದಾರೆ. ಅದರಿಂದ ಏನೂ ಆಗಲ್ಲ, ಕೂಡಲೇ ಎಮರ್ಜೆನ್ಸಿ ಕ್ಯಾಬಿನೆಟ್ ಮೀಟಿಂಗ್ ಮಾಡಿ ರದ್ದುಗೊಳಿಸಬೇಕಿತ್ತು. ಆದರೆ ಮೌಖಿಕವಾಗಿ ಹೇಳುವ ಮೂಲಕ ರೈತರ ಶಾಪಕ್ಕೆ ಗುರಿಯಾಗುತ್ತಾರೆ. ಅಹಿಂದ ಹೆಸರಲ್ಲಿ ಸಿಎಂ ಅಧಿಕಾರಕ್ಕೆ ಬಂದಿದ್ದಾರೆ. ಅವರಿಗೆ ವಿನಾಶಕಾಲಕ್ಕೆ ವಿಪರೀತ ಬುದ್ಧಿ ಬಂದಿದೆ. ಇದು ಕೇವಲ ಹೋರಾಟದ ಪ್ರಾರಂಭ. ಕೂಡಲೇ ಹಿಂಪಡೆಯದೆ ಹೋದಲ್ಲಿ ಉಗ್ರರೂಪ ಪಡೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.