ಅರ್ಥಪೂರ್ಣ ಶತಮಾನೋತ್ಸವ ಆಚರಣೆಗೆ ಸಿದ್ಧತೆ

0
Congress Session Centenary Committee Meeting
Spread the love

ವಿಜಯಸಾಕ್ಷಿ ಸುದ್ದಿ, ಬೆಳಗಾವಿ : ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನನಕ್ಕೆ ನೂರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವರ್ಷವಿಡೀ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ. ಪಾಟೀಲ ತಿಳಿಸಿದರು.

Advertisement

ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಜರುಗಿದ ಶತಮಾನೋತ್ಸವ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶತಮಾನೋತ್ಸವ ಆಚರಣೆ ಕೇವಲ ಬೆಳಗಾವಿ ಕೇಂದ್ರೀಕೃತವಾಗಿರುವುದಿಲ್ಲ. ಪ್ರತಿಯೊಂದು ಕಾರ್ಯಕ್ರಮಗಳನ್ನು ಇಡೀ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು. ಅಧಿವೇಶನ ಹಾಗೂ ಗಾಂಧೀಜಿಯವರ ಜೀವನ ಸಾಧನೆ ಕುರಿತು ದೊಡ್ಡ ಪ್ರಮಾಣದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗುವುದು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ಪೂರ್ಣಗೊಳಿಸಬೇಕಿದೆ ಎಂದರು.

ಅರ್ಥಪೂರ್ಣ, ರಚನಾತ್ಮಕ ಕಾರ್ಯಕ್ರಮ ಆಯೋಜಿಸಲು ಗಾಂಧೀವಾದಿಗಳು, ಹಿರಿಯರೊಂದಿಗೆ ಚರ್ಚಿಸಿ ಅಧಿವೇಶನದ ಇತಿಹಾಸ ಮರುಸೃಷ್ಟಿ ಮತ್ತು ಮೆಲುಕು ಹಾಕಲು ಶತಮಾನೋತ್ಸವ ಆಚರಣೆ ಮಾಡಲಾಗುವುದು. ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾದ ಸ್ಥಳಗಳಿಗೆ ಭೇಟಿ ನೀಡಿ, ವಿಸ್ತೃತವಾಗಿ ಚರ್ಚಿಸಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು. ಅಕ್ಟೋಬರ್ ೨ರಿಂದ ಒಂದು ವರ್ಷಗಳ ಕಾಲ ಶತಮಾನೋತ್ಸವ ವರ್ಷಾಚರಣೆ ಆಯೋಜಿಸಲಾಗುವುದು. ಅಂತಾರಾಷ್ಟೀಯ ಮಹತ್ವ ಪಡೆಯಲು ವಿಧಾನಮಂಡಳ ಜಂಟಿ ಅಧಿವೇಶನ ನಡೆಸಲು ಹಾಗೂ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಕರೆಸಲು ಉದ್ದೇಶಿಸಲಾಗಿದೆ ಎಂದರಲ್ಲದೆ, ಬೆಳಗಾವಿ ಅಧಿವೇಶನ ಕುರಿತು ಸ್ಥಳೀಯ ನಾಟಕಕಾರರು ಒಂದು ವಿಶೇಷ ನಾಟಕವನ್ನು ರಚಿಸುವಂತೆ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಇದೇ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ವೀರಪ್ಪ ಮೊಯ್ಲಿ, ಶತಮಾನೋತ್ಸವವನ್ನು ಸ್ಮರಣೀಯವಾಗಿಸಲು ಶತಮಾನೋತ್ಸವ ಉದ್ಯಾನ ಮತ್ತು ಭವನ ನಿರ್ಮಾಣ ಮಾಡಬೇಕಿದೆ. ಇದಲ್ಲದೇ ಮಹಾತ್ಮಾ ಗಾಂಧಿ ಪುತ್ಥಳಿ ನಿರ್ಮಾಣ, ಅಧಿವೇಶನ ಸ್ಥಳದಲ್ಲಿ ಗಾಂಧಿ ಸ್ಮಾರಕ, ಛಾಯಾಚಿತ್ರ ಹಾಗೂ ವಸ್ತುಪ್ರದರ್ಶನ ಹಾಗೂ ಖಾಯಂ ಮ್ಯೂಸಿಯಂ ಸ್ಥಾಪಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.

Congress Session Centenary Committee Meeting

ಶತಮಾನೋತ್ಸವ ಸಮಿತಿಯ ಸಂಚಾಲಕರಾದ ವಿಧಾನಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ ಅವರು, ಅಧಿವೇಶನದ ಶತಮಾನೋತ್ಸವವು ಒಂದು ವರ್ಷದ ಕಾರ್ಯಕ್ರಮ. ಮುಂದಿನ ಅಕ್ಟೋಬರ್ 2ರವರೆಗಿನವರೆಗೆ ಅಳವಡಿಸಿಕೊಳ್ಳಲಾಗುವುದು ಎಂದು ವಿವರಿಸಿದರು.

ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್, ದೇಶಪಾಂಡೆ ಸ್ಮಾರಕ ಟ್ರಸ್ಟ್ ಅಧ್ಯಕ್ಷರಾದ ರವೀಂದ್ರ ದೇಶಪಾಂಡೆ, ಪ್ರೊ.ಮರಾಠೆ, ನಿಲೇಶ್ ಬೇನಾಳ ಮತ್ತಿತರರು ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ ಸಲಹೆಗಳನ್ನು ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಬೆಳಗಾವಿ ಉತ್ತರ ಶಾಸಕರಾದ ಆಸಿಫ್ (ರಾಜು) ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿ.ಪಂ ಸಿಇಓ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಸಮಿತಿಯ ಸದಸ್ಯರಾದ ಎನ್.ಆರ್. ವಿಶುಕುಮಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಅಧಿವೇಶನ ಸ್ಥಳ-ಹುದಲಿ ಭೇಟಿ

ಸಭೆಯ ಬಳಿಕ ಸಮಿತಿಯ ಅಧ್ಯಕ್ಷರು, ಗೌರವ ಅಧ್ಯಕ್ಷರು, ಸಂಚಾಲಕರು, ಸದಸ್ಯರು ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳವಾದ ಟಿಳಕವಾಡಿ, ವೀರಸೌಧಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನ ಹಾಗೂ ಕಾಂಗ್ರೆಸ್ ಬಾವಿಯನ್ನು ವೀಕ್ಷಿಸಿ, ಜಿಲ್ಲಾಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ನಂತರ ಲೆಲೆ ಮೈದಾನ, ಸಿಪಿಎಡ್ ಮೈದಾನ, ಕಣಬರಗಿಯಲ್ಲಿರುವ ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಮತ್ತು ಹುದಲಿಯಲ್ಲಿರುವ ಮಹಾತ್ಮಾ ಗಾಂಧೀಜಿ ಸ್ಮಾರಕವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಎಚ್.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಗೌರವ ಅಧ್ಯಕ್ಷರಾದ ವೀರಪ್ಪ ಮೊಯ್ಲಿ, ಸಮಿತಿಯ ರಾಜ್ಯ ಸಂಚಾಲಕರಾದ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ, ಸದಸ್ಯರಾದ ಎನ್.ಆರ್. ವಿಶುಕುಮಾರ್, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸಿಫ್(ರಾಜು) ಸೇಠ್, ವಿನಯ ನಾವಲಗಟ್ಟಿ, ಶಿವನಗೌಡ ಪಾಟೀಲ, ರಮೇಶ ಜನಗಲ, ರಾಮಕೃಷ್ಣ ಮರಾಠೆ ಮತ್ತಿತರರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here