ಗದಗ: ಕುತೂಹಲಕಾರಿ ತಿರುವುಗಳನ್ನು ಪಡೆದ ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳಾದ 16ನೇವಾರ್ಡ್‌ನ ಸದಸ್ಯ ಕೃಷ್ಣ ಪರಾಪೂರ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ನಾಲ್ಕನೇ ವಾರ್ಡ್‌ನ ಸದಸ್ಯೆ ಶಕುಂತಲಾ ಅಕ್ಕಿ ಆಯ್ಕೆಯಾದರು.
ಸಚಿವ ಎಚ್.ಕೆ ಪಾಟೀಲ ಹಾಗೂ17 ಜನ ಕಾಂಗ್ರೆಸ್ ಪಕ್ಷದ ಸದಸ್ಯರು ಕೈ ಎತ್ತುವ ಮೂಲಕ ಕಾಂಗ್ರೆಸ್ ಗೆಲುವಿನ ಕೇಕೆ ಹಾಕಿತು. ಆರಂಭದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಸದಸ್ಯರು, ಚುನಾವಣೆ ನಡೆಸದಂತೆ ಒತ್ತಾಯಿಸಿದರು.
ಹೈಕೋರ್ಟ್ ಸ್ಟೇ ಕೊಟ್ಟಿದೆ ಚುನಾವಣೆ ನಡೆಸಬಾರದು ಎಂದು ಚುನಾವಣಾಧಿಕಾರಿಗಳಿಗೆ ಹೇಳಿದರು. ಆದರೆ ಲಿಖಿತ ದಾಖಲೆ ಇರದೇ ಇರುವುದರಿಂದ ಚುನಾವಣಾ ಪ್ರಕ್ರಿಯೆ ಮುಂದುವರೆಯಿತು. ಇದರಿಂದಾಗಿ ಆಕ್ರೋಶಗೊಂಡ ಸಂಸದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಚುನಾವಣೆ ಬಹಿಷ್ಕಾರ ಮಾಡಿ ಹೊರ ಬಂದರು.
ಕಳೆದ ಹಲವು ದಿನಗಳಿಂದ ನೆನಗುದಿಗೆ ಬಿದ್ದಿದ್ದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಫೆ.28ರಂದು ನಿಗದಿಪಡಿಸಿ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದರು.
ಇದರ ಮಧ್ಯೆ ವಕಾರಸಾಲು ಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಿಜೆಪಿ ಸದಸ್ಯರ ಮೇಲೆ ಕೇಸ್ ಆಗಿ ಸದಸ್ಯತ್ವ ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದರು.
ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಅನರ್ಹ ಸದಸ್ಯರು, ತಮ್ಮ ಸದಸ್ಯತ್ವ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಕೋರಿದ್ದರು.
ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಡೆದ ತುರ್ತು ಅರ್ಜಿ ವಿಚಾರಣೆಯಲ್ಲಿ ನಗರಸಭೆ ಸದಸ್ಯರಾದ ಉಷಾ ದಾಸರ, ಅನಿಲ ಅಬ್ಬಿಗೇರಿ, ಗೂಳಪ್ಪ ಮುಶಿಗೇರಿ ಅವರಿಗೆ ಫೆ. ೨೮ರಂದು ನಡೆಯುವ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ನೀಡಿ ಆದೇಶ ಹೊರಡಿಸಿತ್ತು.
ನಂತರದ ಬೆಳವಣಿಗೆಯಲ್ಲಿ ಬೆಳಗಾವಿ ಪ್ರಾದೇಶಿಕ ಆಯುಕ್ತರು ತಮ್ಮ ಹಿಂದಿನ ಆದೇಶವನ್ನು ಮರುಜಾರಿಗೊಳಿಸಿ ಆದೇಶಿಸಿದ್ದರು. ಆದರೆ ಮತ್ತೆ ಮೂರು ಸದಸ್ಯರು ಇಂದು ಹೈಕೋರ್ಟ್ ಮೊರೆ ಹೋಗಿದ್ದರು.