ಮಂಡ್ಯ: 2028ರಲ್ಲಿಯೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಾದರೆ, ಪಕ್ಷದೊಳಗಿನ ಕುರ್ಚಿ ಗೊಂದಲವನ್ನು ಹೈಕಮಾಂಡ್ ಮಧ್ಯಪ್ರವೇಶಿಸಿ ಬಗೆಹರಿಸಬೇಕು ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಒತ್ತಾಯಿಸಿದ್ದಾರೆ.
ಡಿಕೆ ಬೆಂಬಲಿಗ ಶಾಸಕರ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಸಂಬಂಧಿಸಿ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. “ಬಾಲಕೃಷ್ಣ ಅವರ ಜನ್ಮದಿನ ಪ್ರಯುಕ್ತ ಊಟಕ್ಕೆ ಸೇರಿದ್ದೆವು. ಮಟನ್ ಬಿರಿಯಾನಿ ಹಾಗೂ ನಾಟಿ ಸ್ಟೈಲ್ ಅಡುಗೆ ಮಾಡಿಸಿದ್ದರು. ಊಟ ಮಾಡಿದ್ದು ಹೊರತು ಬೇರೆ ಏನೂ ಇಲ್ಲ. ಅಷ್ಟಕ್ಕೇ ಅನಾವಶ್ಯಕ ಊಹಾಪೋಹ ಸೃಷ್ಟಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.
ನಮಗೆ ಸಿಎಂ ಹಾಗೂ ಡಿಸಿಎಂ ಇಬ್ಬರೂ ಒಂದೇ. ನಾನು ಸಿಎಂ ಪರವೂ ಇದ್ದೇನೆ, ಡಿಸಿಎಂ ಪರವೂ ಇದ್ದೇನೆ. 136 ಮಂದಿ ಶಾಸಕರು ಸಿಎಂ ಮತ್ತು ಡಿಸಿಎಂ ಪರ ಇದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲಿ ಎಂಬುದು ನನ್ನ ವೈಯಕ್ತಿಕ ಆಸೆ ಎಂದು ಹೇಳಿದರು.
ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗದಂತೆ, ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು.



