ಬಡವರ ನೆರವಿಗೆ ಕಾಂಗ್ರೆಸ್, ಶ್ರೀಮಂತರ ಸಾಲ ಮನ್ನಾ ಮಾಡೋಕೆ ಬಿಜೆಪಿ: DCM ಡಿಕೆಶಿ ವಾಗ್ದಾಳಿ!

0
Spread the love

ಹುಬ್ಬಳ್ಳಿ:- ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

Advertisement

ಕೇಂದ್ರ ಬೆಲೆ ಏರಿಕೆ ವಿರುದ್ಧ ಹಾಗೂ ಸಂವಿಧಾನ ರಕ್ಷಣೆಗೆ ಹುಬ್ಬಳ್ಳಿಯ ಗಿರಿನಿಚಾಳ ಮೈದಾನದಲ್ಲಿ ಗುರುವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. “ಕಾರ್ಮಿಕರ ದಿನದಂದು ಕಾರ್ಮಿಕ ಸಚಿವರ ಜಿಲ್ಲೆಯಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ದೇಶಕ್ಕೆ ದೊಡ್ಡ ಸಂದೇಶ ರವಾನೆಯಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಜನರ ಆದಾಯ ಪಾತಾಳಕ್ಕೆ ಕುಸಿಯುತ್ತಿದೆ. ಇದಕ್ಕೆ ಕೊನೆಯಾಡಲು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಆದೇಶದಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಯಿತು. ಆದರೆ ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಅವರು ಆಕ್ರೋಶ ಪ್ರಾರಂಭಿಸಿದ ದಿನವೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ಮಾಡಿದೆ. ಇದರಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಣುವಂತಾಗಿದೆ” ಎಂದು ತಿಳಿಸಿದರು.

“ನಿಮ್ಮೆಲ್ಲರ ಆಶೀರ್ವಾದದಿಂದ 136 ಸ್ಥಾನಗಳೊಂದಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿತು ನಂತರ 2 ಪಕ್ಷೇತರ ಶಾಸಕರ ಬೆಂಬಲ ಹಾಗೂ 2 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಸುಪುತ್ರರನ್ನು ಮಣಿಸಿ ನಮಗೆ 140 ಸ್ಥಾನಗಳನ್ನು ಜನ ಕೊಟ್ಟಿದ್ದಾರೆ. ಆಮೂಲಕ ದೇಶಕ್ಕೆ ಸಂದೇಶ ರವಾನಿಸಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದೇ ತಿಂಗಳು 20ಕ್ಕೆ ನಿಮ್ಮ ಸರ್ಕಾರಕ್ಕೆ ಎರಡು ವರ್ಷ ಪೂರ್ಣವಾಗಲಿದೆ. ಈ ಸಂಭ್ರಮಾಚರಣೆ ಪ್ರಯುಕ್ತ ವಿಜಯನಗರದಲ್ಲಿ ದೊಡ್ಡ ಸಮಾವೇಶ ಮಾಡಲು ತೀರ್ಮಾನಿಸಿದ್ದು, ಹೈಕಮಾಂಡ್ ನಾಯಕರಿಗೂ ಆಹ್ವಾನ ನೀಡಿದ್ದೇವೆ” ಎಂದರು.

“ಕಾರ್ಮಿಕ ದಿನಾಚರಣೆ ಅಂಗವಾಗಿ ಪಕ್ಷದ ಪ್ರಣಾಳಿಕೆಯಂತೆ ಗುರುವಾರದಂದು ಪೌರಕಾರ್ಮಿಕರನ್ನು ಖಾಯಂ ಮಾಡಿ 12,696 ಜನರಿಗೆ ಪ್ರಮಾಣಪತ್ರ ನೀಡಿದ್ದೇವೆ. ಬಿಜೆಪಿ ಸರ್ಕಾರ ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಬಡವರಿಗಾಗಿ, ಜನಸಾಮಾನ್ಯರಿಗಾಗಿ ಇಂತಹ ಒಂದೇ ಒಂದು ಕಾರ್ಯಕ್ರಮ ನೀಡಲಿಲ್ಲ. ಬಿಜೆಪಿ ಆಡಳಿತದಲ್ಲಿ ದೊಡ್ಡ ಉದ್ಯಮಿದಾರರು, ಕಾರ್ಖಾನೆ ಮಾಲೀಕರ, ಶ್ರೀಮಂತರ ಸಾವಿರಾರು ಕೋಟಿ ಹಣವನ್ನು ಮನ್ನಾ ಮಾಡುತ್ತಿದ್ದಾರೆ. ನಾವು ಜನರ ಬದುಕು ಕಟ್ಟಲು ವರ್ಷಕ್ಕೆ 52 ಸಾವಿರ ಕೋಟಿ ಮೀಸಲಿಡುತ್ತಿದ್ದೇವೆ. ಆಮೂಲಕ ಬಿಜೆಪಿ ಸರ್ಕಾರ ಶ್ರೀಮಂತರಿಗೆ ನೆರವು ನೀಡುತ್ತಿದ್ದರೆ, ನಿಮ್ಮ ಕಾಂಗ್ರೆಸ್ ಸರ್ಕಾರ ಬಡವರಿಗೆ ನೆರವಾಗುತ್ತಿದೆ. ಉಚಿತವಾಗಿ ವಿದ್ಯುತ್, ಮಹಿಳೆಯರಿಗೆ ತಿಂಗಳಿಗೆ 2 ಸಾವಿರ, ಮಹಿಳೆಯರಿಗೆ ಉಚಿತ ಬಸ್ ಸಾರಿಗೆ, 10 ಕೆ.ಜಿ ಅಕ್ಕಿ, ನಿರುದ್ಯೋಗಿಗಳಿಗೆ ಭತ್ಯೆ ನೀಡಲಾಗುತ್ತಿದೆ. ಇದು ಬೆಲೆ ಏರಿಕೆ ವಿರುದ್ಧ ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡಿದ ಪ್ರಯೋಜನ” ಎಂದು ತಿಳಿಸಿದರು.

“ಬಿಜೆಪಿ ಆಡಳಿತದಲ್ಲಿ ಎಲ್ಲಾ ವಸ್ತುಗಳ ದರ ಏರಿಕೆಯಾಗುತ್ತಿದೆ. ಚಿನ್ನದ ಬೆಲೆ ಏರಿಕೆಯಿಂದ ಬಡವರು ಮಾಂಗಲ್ಯ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಯುಪಿಎ ಅವಧಿಯಲ್ಲಿ 10 ಗ್ರಾಂ ಚಿನ್ನಕ್ಕೆ 28 ಸಾವಿರ ಇತ್ತು, ಈಗ ಅದು 98 ಸಾವಿರಕ್ಕೆ ತಲುಪಿದೆ. ಬೆಳ್ಳಿ ಕೆ.ಜಿಗೆ 43 ಸಾವಿರದಿಂದ 94 ಸಾವಿರಕ್ಕೆ ಏರಿದೆ. ಕಾಂಗ್ರೆಸ್ ಅವಧಿಯಲ್ಲಿ 1 ಡಾಲರ್ ಮೊತ್ತ 58 ರೂಪಾಯಿ ಇತ್ತು, ಈಗ ಅದು 84 ರೂಪಾಯಿಗೆ ಏರಿದೆ. ಸಿಮೆಂಟ್ 268ರಿಂದ 410, ಕಬ್ಬಿಣ 39 ಸಾವಿರದಿಂದ 73 ಸಾವಿರಕ್ಕೆ ಏರಿದೆ. ಇದರಿಂದಾಗಿ ಬಡವರು ಮನೆ ಕಟ್ಟುವುದು ಅಸಾಧ್ಯವಾಗಿದೆ. ನಮ್ಮ ಸರ್ಕಾರ ಬಡವರಿಗೆ ಆಶ್ರಯ ಅಥವಾ ಇತರೆ ಯೋಜನೆಗಳ ಮೂಲಕ ಬಡವರಿಗೆ ಮನೆ ಕಟ್ಟಿ ಕೊಟ್ಟರೆ, ನಾವು ಕೇಂದ್ರ ಸರ್ಕಾರಕ್ಕೆ ಶೇ 18 ಜಿಎಸ್ಟಿ ಪಾವತಿಸಬೇಕು. ಕೇಂದ್ರ ಸರ್ಕಾರ ವಸತಿ ಯೋಜನೆಗೆ ಕೇವಲ ರೂ.1 ಲಕ್ಷ ಮಾತ್ರ ನೀಡುತ್ತದೆ. ಜಿಎಸ್ ಟಿ ಮೂಲಕ ಅದನ್ನು ವಾಪಸ್ ಕಿತ್ತುಕೊಳ್ಳುತ್ತಿದೆ” ಎಂದು ವಾಗ್ದಾಳಿ ನಡೆಸಿದರು.

“ಜಿಎಸ್ಟಿ, ಬೆಲೆ ಏರಿಕೆ ಸೇರಿದಂತೆ ವಿವಿಧ ರೀತಿಯಲ್ಲಿ ಕೇಂದ್ರ ಸರ್ಕಾರ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಬಿಜೆಪಿಯ ಈ ಬೆಲೆ ಏರಿಕೆಯಿಂದ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕಂಡಿದೆ. ನಮ್ಮ ಸರ್ಕಾರ ರೈತರು, ಹಾಲು ಉತ್ಪಾದಕರಿಗೆ ನೆರವು ನೀಡಲು, ಹಾಲಿನ ಬೆಲೆಯಲ್ಲಿ 4 ರೂಪಾಯಿ ಹೆಚ್ಚಿಸಿದರೆ ಅದರ ವಿರುದ್ಧ ಬಿಜೆಪಿ ಜನಾಕ್ರೋಶ ಪ್ರತಿಭಟನೆ ಮಾಡುತ್ತಿದ್ದಾರೆ. ಆಮೂಲಕ ತಮ್ಮ ರೈತ ವಿರೋಧಿ ನೀತಿ ಪ್ರದರ್ಶಿಸುತ್ತಿದ್ದಾರೆ. ಅವರ ಜನಾಕ್ರೋಶ ಏನಿದ್ದರೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಇರಬೇಕು. ನಮ್ಮ ಸರ್ಕಾರದ ವಿರುದ್ಧ ಜನಾಕ್ರೋಶ ಮಾಡಲು ಸಾಧ್ಯವಿಲ್ಲ. ಬಿಜೆಪಿ ಹಾಗೂ ದಳದ ಪ್ರತಿಭಟನೆಯಲ್ಲಿ 2 ಸಾವಿರ ಜನರೂ ಇರುತ್ತಿರಲಿಲ್ಲ. ಆದರೆ ನಮ್ಮ ಪ್ರತಿಭಟನಾ ಸಮಾವೇಶದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಸಾವಿರಾರು ಜನ ಸೇರಿದ್ದೀರಿ” ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here