ಪಿಎಲ್‌ಡಿ ಬ್ಯಾಂಕ್ ಚುನಾವಣೆಯ 14 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಎಲ್ಲ 14 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

Advertisement

ಜ. 5ರಂದು ಪಿಎಲ್‌ಡಿ ಬ್ಯಾಂಕ್‌ಗೆ ಮತದಾನ ನಡೆದಿತ್ತು. ಚುನಾವಣೆಗೂ ಮೊದಲು 14 ಸ್ಥಾನಗಳ ಪೈಕಿ 7 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದವು. ಉಳಿದ 7 ಸ್ಥಾನಗಳಿಗೆ ಚುನಾವಣೆ ನಡೆದಿತ್ತಲ್ಲದೆ ಮತಗಳ ಎಣಿಕೆ ಕಾರ್ಯವೂ ಪೂರ್ಣಗೊಂಡಿತ್ತು. ನ್ಯಾಯಲಯದಲ್ಲಿ ಪ್ರಕರಣ ಇದ್ದುದರಿಂದ ಫಲಿತಾಂಶ ಘೋಷಣೆಯಾಗಿರಲಿಲ್ಲ.

ಇನ್ನು ಮತಗಳ ಎಣಿಕೆ ಸಂಧರ್ಭದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭಾರೀ ಮುನ್ನಡೆಯಲ್ಲಿರುವದರಿಂದ 6 ಜನ ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ತಾವು ಸಲ್ಲಿಸಿದ್ದ ಅರ್ಜಿಗಳನ್ನು ವಾಪಸ್ಸು ಪಡೆದಿದ್ದರು. ಹೀಗಾಗಿ ಕಾಂಗ್ರೆಸ್ ಬೆಂಬಲಿತ 6 ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದರು. ಆದರೆ ಸವಡಿ ಸಾಲಗಾರರ ಕ್ಷೇತ್ರದ ಅಭ್ಯರ್ಥಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದಿರಲಿಲ್ಲ. ಹೀಗಾಗಿ ನ್ಯಾಯಲಯ ಜ.24ರಂದು ಮತಗಳ ಎಣಿಕೆ ಕಾರ್ಯ ನಡೆಸುವಂತೆ ಆದೇಶ ಮಾಡಿತ್ತು.

ಈ ದಿಸೆಯಲ್ಲಿ ಚುನಾವಣಾಧಿಕಾರಿ ಮತಗಳ ಎಣಿಕೆ ಕಾರ್ಯವನ್ನು ನಡೆಸಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅನುಸೂಯಾ ಪರಡ್ಡಿ 149 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಕ್ಕಮಹಾದೇವಿ ನರೆಗಲ್ಲ 104 ಮತಗಳನ್ನು ಪಡೆದರು. 149 ಮತಗಳನ್ನು ಪಡೆದ ಅನುಸೂಯಾ ಪರಡ್ಡಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು.

ವಿ.ಆರ್. ಗುಡಿಸಾಗರ, ಪರಶುರಾಮ ಅಳಗವಾಡಿ, ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ಯಚ್ಚರಗೌಡ ಗೋವಿದಗೌಡರ್, ಕುಬೇರಗೌಡ ಪರಡ್ಡಿ, ಬಸವರಾಜ ಜಗ್ಗಲ ಸೇರಿದಂತೆ ಅನೇಕ ಮುಖಂಡರು ವಿಜಯೋತ್ಸವದ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾಸಕ ಜಿ.ಎಸ್. ಪಾಟೀಲರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ರೈತರು ಪಕ್ಷದ 14 ಅಭ್ಯರ್ಥಿಗಳಿಗೆ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಇನ್ನು ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಮತಕ್ಷೇತ್ರದ ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ.

– ವಿ.ಆರ್. ಗುಡಿಸಾಗರ.

ಹಿರಿಯ ಮುಖಂಡರು.


Spread the love

LEAVE A REPLY

Please enter your comment!
Please enter your name here