ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಕೆ ವಿಚಾರ ರಾಜಕೀಯ ಹಿಂಸೆಗೆ ತಿರುಗಿ ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಸತೀಶ್ ರೆಡ್ಡಿ ಅವರ ಮೂವರು ಗನ್ಮ್ಯಾನ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ವಶಕ್ಕೆ ಸಿಕ್ಕಿರುವ ಮಹೇಂದ್ರ ಸಿಂಗ್, ಬಲಜಿತ್ ಸಿಂಗ್ ಮತ್ತು ಗುರುಚರಣ್ ಸಿಂಗ್ ಪಂಜಾಬ್ ಮೂಲದವರಾಗಿದ್ದು, ಈ ಮೂವರು ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಜನವರಿ 1ರಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ಕಾರ್ಯಕ್ರಮವೊಂದರ ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಈ ಗಲಾಟೆ ತೀವ್ರ ಸ್ವರೂಪ ಪಡೆದು ಫೈರಿಂಗ್ ನಡೆದಿದ್ದು, ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಹಾಗೂ ಮೊಬೈಲ್ ವೀಡಿಯೋ ದೃಶ್ಯಾವಳಿಗಳ ಆಧಾರದಲ್ಲಿ 10ಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಬಳಿಕ ನಾಪತ್ತೆಯಾಗಿದ್ದ ಸತೀಶ್ ರೆಡ್ಡಿ ಅವರ ಗನ್ಮ್ಯಾನ್ಗಳನ್ನು ಇದೀಗ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣವು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಫೈರಿಂಗ್ಗೆ ಕಾರಣವಾದ ಹಿನ್ನೆಲೆ, ಹೊಣೆಗಾರಿಕೆ ಹಾಗೂ ಭದ್ರತಾ ಲೋಪದ ಕುರಿತಂತೆ ತನಿಖೆ ಮುಂದುವರಿದಿದೆ.



