ವಿಜಯಸಾಕ್ಷಿ ಸುದ್ದಿ, ಗದಗ : ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದ ಸರ್ಕಾರವು ಯುವಕರಿಗಾಗಿ ‘ಯುವ ನಿಧಿ’ ಕಾರ್ಯರೂಪಕ್ಕೆ ತಂದಿದ್ದು, ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಯುವ ನ್ಯಾಯ’ ಯೋಜನೆ ಜಾರಿಯಾಗಲಿದೆ. ಹೀಗಾಗಿ ಯುವಕರು ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಗೆಲ್ಲಿಸುವಂತೆ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಸರ್ಕಾರದಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಅಗತ್ಯಕ್ಕೆ ತಕ್ಕಂತೆ ಭರ್ತಿ ಮಾಡುವುದರ ಜತೆಗೆ 40 ವರ್ಷದೊಳಗಿನ ಯುವಕರು ಸ್ವಂತ ಉದ್ಯಮ ಆರಂಭಿಸಲು ಮುಂದಾದರೆ ಹಣಕಾಸಿನ ನೆರವು ಸಿಗಲಿದೆ. 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ಡಿಪ್ಲೊಮಾ ಹೊಂದಿರುವವರು ಅಥವಾ ಕಾಲೇಜು ಪದವೀಧರರಿಗೆ ಖಾಸಗಿ ಅಥವಾ ಸಾರ್ವಜನಿಕ ವಲಯದ ಕಂಪನಿಯಲ್ಲಿ ಒಂದು ವರ್ಷದ ಶಿಷ್ಯವೃತ್ತಿಯನ್ನು ಒದಗಿಸಲು ಹೊಸ ಅಪ್ರೆಂಟಿಸ್‌ಶಿಪ್ ಕಾಯಿದೆಯನ್ನು ಕಾಂಗ್ರೆಸ್ ಖಾತರಿಪಡಿಸುತ್ತದೆ. ಅಪ್ರೆಂಟಿಸ್‌ಗಳು ವರ್ಷಕ್ಕೆ 11 ಲಕ್ಷ ಪಡೆಯುತ್ತಾರೆ. ಅಪ್ರೆಂಟಿಸ್‌ಶಿಪ್ ಕೌಶಲ್ಯಗಳನ್ನು ನೀಡುತ್ತದೆ, ಉದ್ಯೋಗವನ್ನು ಹೆಚ್ಚಿಸುತ್ತದೆ ಮತ್ತು ಲಕ್ಷಾಂತರ ಯುವಕರಿಗೆ ಪೂರ್ಣ ಸಮಯದ ಉದ್ಯೋಗ ಅವಕಾಶಗಳನ್ನು ಒದಗಿಸುತ್ತದೆ.
ದೇಶದಲ್ಲಿ ಯುವಕರು ಕಾಂಗ್ರೆಸ್ ಬೆಂಬಲಿಸಿ, ಅಧಿಕಾರಕ್ಕೆ ತಂದರೆ ಸರ್ಕಾರಿ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು ರದ್ದುಗೊಳಿಸಲಿವೆ. ಜೊತೆಗೆ 21 ವರ್ಷದೊಳಗಿನ ಪ್ರತಿಭಾವಂತ ಮತ್ತು ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾಸಿಕ 10,000 ರೂ.ನಂತೆ ಕ್ರೀಡಾ ವಿದ್ಯಾರ್ಥಿವೇತನವನ್ನು ನೀಡಲಿದೆ ಎಂದು ಅಶೋಕ ಮಂದಾಲಿ ಹೇಳಿದ್ದಾರೆ.