ಬೆಂಗಳೂರು:- ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಮಾನನಷ್ಟ ಮೊಕದ್ದಮೆಯ ನಾಟಕವನ್ನು ಬಿಟ್ಟು ಬಿಡಬೇಕು. ಸರ್ಕಾರದ 5 ಗ್ಯಾರಂಟಿಗಳೂ ಅರ್ಧಕ್ಕರ್ಧ ಜನರಿಗೆ ಮುಟ್ಟಿಲ್ಲ. ಆದರೂ, 5 ಗ್ಯಾರಂಟಿಗಳ ಹೆಸರಿನಲ್ಲಿ 5 ವರ್ಷ ದೂಡಿ ಹೋಗಬೇಕೆಂಬ ಯೋಚನೆಯಲ್ಲಿ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಯಾವುದೇ ಸಾಧನೆ ಮಾಡದೆ 2 ವರ್ಷ ಕಳೆದಿದ್ದಾರೆ. ಸಾಧನೆ ಇಲ್ಲದ ವೇದನಾ ಸಮಾವೇಶ ಮಾಡಿದ್ದಾಗಿ ಮೊದಲೇ ಹೇಳಿದ್ದೇವೆ. ಬೆಂಗಳೂರಿನ ಮಳೆಯಿಂದ ಆದ ಹಾನಿ ಪರಿಸ್ಥಿತಿ ನೋಡಲಿಲ್ಲ. ಮಳೆಯಿಂದ 5 ಜನರು ಮರಣ ಹೊಂದಿದರೂ ಗಮನಿಸಲಿಲ್ಲ. ನಿಮಗೆ ಜನರ ಪ್ರಾಣ, ಮಾನ ಮುಖ್ಯವಲ್ಲ. ಕೇವಲ ಅಧಿಕಾರ ಮಾತ್ರ ಮುಖ್ಯ ಎಂಬುದನ್ನು ತೋರಿಸಿಕೊಡುತ್ತಾ ಹೋಗುತ್ತಿದ್ದೀರಿ ಎಂದು ಕಿಡಿಕಾರಿದರು.
ಇವತ್ತು ನಮ್ಮ ವಿರುದ್ಧ ಮೊಕದ್ದಮೆ ಹೂಡಿದ್ದೀರಿ. ನಮ್ಮ ಸರ್ಕಾರ ಇದ್ದಾಗ ನೀವು ಸುಳ್ಳು ಆರೋಪ ಮಾಡಿದ್ದೀರಿ. ನಿಮ್ಮ ಸರ್ಕಾರವು ಬೆಳಗ್ಗೆ ಎದ್ದು ಬಳಸುವ ಹಾಲಿನಿಂದ ಆಲ್ಕೋಹಾಲಿನವರೆಗೆ ಎಲ್ಲಾ ದರಗಳನ್ನೂ ಹೆಚ್ಚಿಸಿದೆ. ಅದನ್ನೇ ನಾವು ಹೇಳಿದ್ದೇವೆ. ಇದರಲ್ಲಿ ಸುಳ್ಳಿದೆಯೇ? ಹೆಚ್ಚಿಸಿದ ಹಾಲಿನ ದರವನ್ನು ರೈತರಿಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.