ದೇಶಕ್ಕೆ ಕಾಂಗ್ರೆಸ್‌ನ ಕೊಡುಗೆ ಅಪಾರ : ವಿನಯ ಕುಲಕರ್ಣಿ

0
vinay
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಭಾವನಾತ್ಮಕ ಸಂಗತಿಗಳನ್ನು ಮುಂದಿಟ್ಟುಕೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹತ್ತು ವರ್ಷಗಳಿಂದ ನೀಡಿದ ಭರವಸೆ ಈಡೇರಿಸಲಿಲ್ಲ. ರೈತರ ಭಾವನೆಗಳಿಗೆ ಸ್ಪಂದಿಸಲಿಲ್ಲ. ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಮತ ಕೇಳುವ ಬಿಜೆಪಿಗೆ ಈ ಬಾರಿ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ, ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ ಹೇಳಿದರು.

Advertisement

ಅವರು ಪಟ್ಟಣದಲ್ಲಿ ಶುಕ್ರವಾರ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ತವರು ನೆಲದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ಪಕ್ಷ ವಿಶ್ವಗುರು ಬಸವಣ್ಣನವರ ಆದರ್ಶಗಳನ್ನು ಪಾಲಿಸುತ್ತ ಬಂದಿದೆ. ಎಲ್ಲರನ್ನೂ ಸಮಾನತೆಯಿಂದ ಕಾಣುವ ಕಾಂಗ್ರೆಸ್ ಈ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಬಿಜೆಪಿ ದೇಶದ ಪ್ರತಿಯೊಬ್ಬರಿಗೂ ಸ್ವಿಸ್ ಬ್ಯಾಂಕ್‌ನ ಹಣ ಜಮಾ ಮಾಡುವುದಾಗಿ ಹೇಳಿತು. ಜನರು ನಂಬಿ ಜನ್ ಧನ್ ಖಾತೆ ತೆರೆದರು. ಪೇಸಿಎಂ ಖ್ಯಾತಿಯ ಬಸವರಾಜ ಬೊಮ್ಮಾಯಿಯವರನ್ನು ತಿರಸ್ಕರಿಸಿ, ನಿಮ್ಮ ಮನೆಯ ಮಗನನ್ನು ಆಯ್ಕೆ ಮಾಡಿ ಕಳಿಸಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.

ವಿ.ಪ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಸದಾ ಧರ್ಮದ ಮೇಲೆ ವಿಶ್ವಾಸವಿಟ್ಟ ಕಾಂಗ್ರೆಸ್ ಪಕ್ಷ ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸಬೇಕು ಎಂದರು.

ಇದಕ್ಕೂ ಮುನ್ನ ಪಟ್ಟಣದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ರೋಡ್ ಶೋಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೂದ್ ಫೀರಾಂ ದರ್ಗಾವರೆಗೆ ಸಾಗಿ ಬಂದಿತು.

kulakarni

ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಸಯ್ಯದ್ ಅಜ್ಜಿಂಫೀರ್ ಖಾದ್ರಿ, ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಗಡ್ಡದೇವರಮಠ, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಗುರುನಾಥ ದಾನಪ್ಪನವರ, ಚನ್ನಪ್ಪ ಜಗಲಿ, ಎಸ್.ಪಿ. ಬಳಿಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಜಿ.ಆರ್. ಕೊಪ್ಪದ, ಅಮರೇಶ ತೆಂಬದಮನಿ, ಫಕ್ಕೀರೇಶ ಮ್ಯಾಟಣ್ಣನವರ, ಸೋಮಣ್ಣ ಬೆಟಗೇರಿ, ವಿರೂಪಾಕ್ಷಪ್ಪ ಪಡಗೇರಿ, ಪದ್ಮರಾಜ ಪಾಟೀಲ, ರಾಜೀವ ಕುಂಬಿ, ದಾದಾಪೀರ ಮುಚ್ಚಾಲೆ, ರಾಮಣ್ಣ ಅಡಗಿಮನಿ, ಸರ್ಫರಾಜ ಸೂರಣಗಿ, ನೀಲಪ್ಪ ಶೆರಸೂರಿ, ಶಿವನಗೌಡ ಪಾಟೀಲ, ಜಯಕ್ಕ ಕಳ್ಳಿ, ಭಾಗ್ಯಶ್ರೀ ಬಾಬಣ್ಣ, ಮಂಜುನಾಥ ಘಂಟಿ ಸೇರಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ತಮ್ಮ ಮಧ್ಯೆ ಇದ್ದು ಸೇವೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಕ್ಷೇತ್ರದ ಮತದಾರರ ಭಾವನೆಗಳಿಗೆ ಸದಾ ಸ್ಪಂದಿಸುವೆ. ಪಕ್ಷ ಪ್ರತಿನಿಧಿಯಾದ ನನ್ನನ್ನು ಈ ಬಾರಿ ಆಶೀರ್ವದಿಸಿ ಎಂದು ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here