ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕ ಜಯ ಗ್ಯಾರಂಟಿಗಳ ಆಮಿಷದ್ದೇ ಹೊರತು ಅರ್ಹ ಗೆಲುವಲ್ಲ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ್ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಹೊಸಪೇಟೆ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಜತೆ ಅರಿತ ಮತದಾರ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯಾದ ಮೇಲೆ ಹೊಸ ಚೈತನ್ಯ ಬಂದಂತಾಗಿದೆ. ರಾಜ್ಯಾದ್ಯಂತ ಪ್ರತೀ ಕ್ಷೇತ್ರದ ಎಲ್ಲಾ ಘಟಕಗಳಿಗೂ ಹಳೆಯ ಬೇರು-ಹೊಸ ಚಿಗುರು ಎಂಬಂತೆ ಹಳಬರ ಜ್ಞಾನ, ಹೊಸಬರ ಹುಮ್ಮಸ್ಸು ಸೇರಿಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ ಎಂದರು.
ಈಗ ಆಯ್ಕೆಯಾಗಿರುವ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮಾ. 16ರಂದು ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಭೈರತಿ ಬಸವರಾಜ್, ಜಿ.ಎಂ. ಸಿದ್ದೇಶ್ವರ್ ಸೇರಿದಂತೆ ಅನೇಕ ರಾಜ್ಯ ಹಾಗೂ ಜಿಲ್ಲಾ ನಾಯಕರುಗಳು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲೆಯ ಕಾರ್ಯದರ್ಶಿ ಮತ್ತಿಹಳ್ಳಿ ಕೊಟ್ರೇಶ್, ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆರ್.ಲೋಕೇಶ್, ಮಂಡಲ ಕಾರ್ಯದರ್ಶಿ ಯು.ಎನ್. ಪ್ರವೀಣ್, ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಮನೋಜ್ ತಳವಾರ್ ಅವರ ಸ್ಥಾನಗಳಿಗೆ ನೀಡಿದ ರಾಜನಾಮೆಯನ್ನು ಜಿಲ್ಲಾಧ್ಯಕ್ಷರು ಅಂಗೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳ ಆಯ್ಕೆ ನಡೆಯುವುದು ಎಂದರು.
ಮಂಡಲ ಅಧ್ಯಕ್ಷ ಕೆ. ಲಕ್ಷö್ಮಣ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಸಹಕಾರ ಸಂಘಗಳ ರಾಜ್ಯಾದ್ಯಕ್ಷ ನಂಜನಗೌಡ, ಜಿಲ್ಲಾ ಉಪಾಧ್ಯಕ್ಷ ಹೆಚ್.ಎಂ. ಅಶೋಕ್ ಹರಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ, ಬ್ಯಾಲಾಹುಣಸಿ ರಾಮಣ್ಣ, ಕುಸುಮಾ ಜಗದೀಶ್, ಚನ್ನನಗೌಡ, ಕಣಿವಿಹಳ್ಳಿ ಮಂಜುನಾಥ್, ಉದಯಕುಮಾರ್, ಮುತ್ತಿಗಿ ವಾಗೀಶ್, ಸಂಗಮೇಶ್, ವೆಂಕಟೇಶ್ ನಾಯ್ಕ್, ಹಲವಾಗಲು ದ್ಯಾಮಜ್ಜ, ಕಡತಿ ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.