ಬೆಂಗಳೂರು:- ಕಾಂಗ್ರೆಸ್ ನ ಎರಡುವರೆ ವರ್ಷದ ಸಾಧನೆ ಕೇವಲ ‘ಲೂಟಿ’ ಮಾತ್ರ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕೆ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಇದು ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ ಅಥವಾ ಕಸದ ಬೆಂಗಳೂರೇ ಎಂದು ಟೀಕೆ ಮಾಡಿದ್ದಾರೆ. ಇವರು ಅಧಿಕಾರ ಹಂಚಿಕೆಯಲ್ಲಿದ್ದಾರೆ. ಹಳ್ಳ ಗುಂಡಿಗಳ ಕಡೆ ಗಮನ ಕೊಡುತ್ತಿಲ್ಲ, ಇದು ದುರಹಂಕಾರದ ಪರಮಾವಧಿ ಎಂದು ಟೀಕಿಸಿದರು. ಇಡೀ ಕರ್ನಾಟಕದಲ್ಲಿ ಹಳ್ಳ ಬಿದ್ದ ರಸ್ತೆಗಳು, ಕಸದ ರಾಶಿ, ಅಭಿವೃದ್ಧಿ ಶೂನ್ಯ, ಲೂಟಿ- ಇಷ್ಟೇನಾ ನಿಮ್ಮ ಎರಡೂವರೆ ವರ್ಷದ ಸಾಧನೆ ಎಂದು ಕೇಳಿದರು.
ಮಾನ ಮರ್ಯಾದೆ ಇದ್ದರೆ ಗುಂಡಿ ಮುಚ್ಚಬೇಕು. ರಸ್ತೆ ಡಾಂಬರೀಕರಣ ಮಾಡಿ ಎಂದು ಒತ್ತಾಯಿಸಿದರು. ಮಾತೆತ್ತಿದರೆ ಹಣ ಬಿಡುಗಡೆ ಮಾಡಿದ್ದೇವೆ ಎನ್ನುತ್ತಾರೆ. ಆ ಹಣ ಎಲ್ಲಿ ಹೋಗಿದೆ? ಕಳೆದ 4 ತಿಂಗಳಿನಿಂದ ಹಣ ಬಿಡುಗಡೆ ಮಾಡಿದ್ದೇವೆ ಎನ್ನುತ್ತೀರಲ್ಲವೇ?. ಇದು ಆಸ್ಪತ್ರೆ ರಸ್ತೆ. ಇಲ್ಲಿ ಪ್ರತಿಭಟನೆ, ಪರಿಶೀಲನೆಗೆ ಬಂದಿದ್ದೇವೆ. ಈ ರಸ್ತೆಯಲ್ಲಿ ಹೋದರೆ ತನ್ನಿಂತಾನೇ ಹೆರಿಗೆ ಆಗುತ್ತದೆ ಎಂದು ವ್ಯಂಗ್ಯವಾಗಿ ತಿಳಿಸಿದರು. ಒಂದು ಕಿಮೀ ರಸ್ತೆಯಲ್ಲಿ 400 ಹಳ್ಳ ಬಿದ್ದಿದೆ ಎಂದು ಹರಿಹಾಯ್ದಿದ್ದಾರೆ.


