ಕಾಂಗ್ರೆಸ್‌ನದ್ದು ಶೂನ್ಯ ಅಭಿವೃದ್ಧಿಯ ಸಮಾವೇಶ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ ಉಚಿತ ಹೆಸರಿನಲ್ಲಿ ಸಚಿವರು, ಅಧಿಕಾರಿಗಳು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ತಾಯಂದಿರು ಬ್ಯಾಂಕ್‌ಗಳಿಗೆ ನಿತ್ಯವೂ ಅಲೆದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯ ಅಭಿವೃದ್ಧಿಯ ಸಮಾವೇಶ ಮಾಡುತ್ತಿರುವುದು ರಾಜ್ಯದ ಜನತೆಗೆ ಬೇಸರ ತರಿಸಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

Advertisement

ಅವರು ಮಂಗಳವಾರ ಶಿರಹಟ್ಟಿಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಜನಸಂಪರ್ಕ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಕಾಂಗ್ರೆಸ್ ಸಮಾವೇಶ ಯಾವ ಮಂತ್ರಿಗಳಿಗೆ ಎಷ್ಟು ಹಣ ಹೋಗಿದೆ, ಕೆಪಿಸಿಸಿ ಉಸ್ತುವಾರಿಗೆ ಎಷ್ಟು ಕೊಡಬೇಕೆನ್ನುವ ಸಲುವಾಗಿ ಮಾಡಿದ ಸಮಾವೇಶವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಎಲ್ಲ ಸರಕಾರಿ ಕಚೇರಿಗಳಲ್ಲಿ ಏಜೆಂಟರು ಹುಟ್ಟಿಕೊಂಡಿದ್ದಾರೆ. ಹೀಗಾಗಿ ಇದು ವಸೂಲಿ ಸರಕಾರ ಮತ್ತು ಹಗರಣಗಳ ಸರಮಾಲೆ ನೀಡಿದ ಸರಕಾರವಾಗಿದೆ ಎಂದು ಆರೋಪಿಸಿದರು.

ಶಕ್ತಿ ಯೋಜನೆಗೆ ಹೆಚ್ಚಿಗೆ ಬಸ್‌ಗಳನ್ನು ಬಿಡಲಿಲ್ಲ. ಸಿಬ್ಬಂದಿಗಳ ನೇಮಕವಾಗಲಿಲ್ಲ. ಇದರಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯಲ್ಲಿಯೂ ಸಹ 3-4 ತಿಂಗಳುಗಳಿಂದ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲ. ಉಚಿತ ವಿದ್ಯುತ್ ನೀಡಿ ಬೇರೆಯವರಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದೆ. ಯುವನಿಧಿ ಯೋಜನೆಯನ್ನು ಎಷ್ಟು ಜನಕ್ಕೆ ನೀಡುತ್ತಿದ್ದಾರೆಂಬ ಸ್ಪಷ್ಟ ಮಾಹಿತಿ ಇಲ್ಲ. ಇದೊಂದು ನ್ಯೂನತೆಗಳ ಸಮಾವೇಶ ಎಂದರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ಮಹಿಳಾ ತಾಲೂಕಾಧ್ಯಕ್ಷೆ ನಂದಾ ಪಲ್ಲೇದ, ಸಂದೀಪ ಕಪ್ಪತ್ತನವರ, ಬಸವರಾಜ ವಡವಿ, ಅಕ್ಬರಸಾಬ ಯಾದಗಿರಿ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚೆಗೆ ಶಿರಹಟ್ಟಿ ತಾಲೂಕಿನ, ಶಿವಮೊಗ್ಗ ಜಿಲ್ಲೆ ಕೂಡ್ಲಿಗಿ ಮಠಕ್ಕೆ ಸಂಬಂಧಿಸಿದ 22 ಎಕರೆ ಆಸ್ತಿಯನ್ನು ಪ್ರಭಾವಿಯೊಬ್ಬರೂ ತಮ್ಮ ಹೆಸರಿಗೆ ಬರೆಯಿಸಿಕೊಂಡಿರುವುದು ವಿಷಾದದ ಸಂಗತಿ. ತಹಸೀಲ್ದಾರರು ಮತ್ತು ಇತರೆ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಡಾ. ಚಂದ್ರು ಲಮಾಣಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here