ರಾಮನಗರ:- ಸತತ ಸೋತಿದ್ದೇನೆ, ದಯವಿಟ್ಟು ನನ್ನ ಕೈ ಬಿಡಬೇಡಿ ಎಂದು ಮತದಾರರಲ್ಲಿ ನಿಖಿಲ್ ಮನವಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನಾನು ಎರಡು ಬಾರಿ ಪೆಟ್ಟು ತಿಂದಿದ್ದೇನೆ. ಈ ಬಾರಿ ನಿಮ್ಮನ್ನ ನಂಬಿ ಕೊನೆಯದಾಗಿ ಚುನಾವಣೆಗೆ ನಿಂತಿದ್ದೇನೆ. ನನ್ನ ಕೈ ಬಿಡಬೇಡಿ ಎಂದರು.
ಚಕ್ಕೆರೆ ಗ್ರಾಮದಲ್ಲಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡವರು ಕಾಂಗ್ರೆಸ್‌ಗೆ ಹೋಗಿದ್ದಾರೆ. ಆದರೆ ಚಕ್ಕೆರೆಯಲ್ಲಿ ಅನೇಕ ಜನರು ಜೆಡಿಎಸ್ ಪಕ್ಷ ಕಟ್ಟಿದ್ದಾರೆ. ನಿಖಿಲ್ ಚುನಾವಣೆಗೆ ನಿಲ್ಲಬೇಕು ಎಂದು ಕ್ಷೇತ್ರದ ಜನರು ಮನವಿ ಮಾಡಿದ್ದರು. ಈ ಚುನಾವಣೆ ನನ್ನ ಪಾಲಿಗೆ ಅನಿರೀಕ್ಷಿತ ಬೆಳವಣಿಗೆ. ಸಿಎಂ, ಡಿಸಿಎಂ, ಎಲ್ಲಾ ಸಚಿವರು ಒಬ್ಬ ನಿಖಿಲ್ ಸೋಲಿಸೋಕೆ ಬಂದಿದ್ದಾರೆ. ನನ್ನ ಎರಡು ಸೋಲು ಜನರು ಸೋಲಿಸಿದಲ್ಲ. ಜನರು ತಮ್ಮ ಮನಸಿನಲ್ಲಿ ನನಗೆ ಜಾಗ ಕೊಟ್ಟಿದ್ದಾರೆ ಎಂದರು.
ನಾನು ಶಾಸಕ ಆಗಬೇಕು ಅಂತ ಚುನಾವಣೆಗೆ ನಿಂತಿಲ್ಲ. ನನಗೆ ನನ್ನ ಜವಾಬ್ದಾರಿ ಅರಿವಿದೆ. ಯುವಕನ ಜೊತೆ ನಿಲ್ಲಬೇಕು ಅಂತ ನೀವೆಲ್ಲ ಬಂದಿದ್ದೀರಾ. ನಿಖಿಲ್ ನಿಮ್ಮ ಹೃದಯ ಗೆಲ್ಲೋಕೆ ಬಂದಿದ್ದಾನೆ. ಬೇರೆ ಆಸೆಯಿಲ್ಲ. ಕುತಂತ್ರದಿಂದ ಎರಡು ಚುನಾವಣೆ ಸೋತೆ. ಬಳಿಕ ನಾನು ಚುನಾವಣೆಗೆ ಸ್ಪರ್ಧೆ ಮಾಡೋದು ಬೇಡ ಅಂತ ನಿರ್ಧಾರ ಮಾಡಿದ್ದೆ. ವಿರೋಧ ಪಕ್ಷಗಳು ನಿತ್ಯ ಟೀಕೆ ಮಾಡುತ್ತಿದ್ದಾರೆ. 2019 ಲೋಕಸಭೆ ಚುನಾವಣೆಯಲ್ಲಿ ಶಾಸಕರು, ಕಾರ್ಯಕರ್ತರ ಒತ್ತಾಯಕ್ಕೆ ಸ್ಪರ್ಧೆ ಮಾಡಿದ್ದೆ.
ಜನ ಎಂದೂ ನನ್ನ ಕೈ ಬಿಡಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲನೆ ಮಾಡಿಲ್ಲ. 5 ವರ್ಷ ಕುಮಾರಸ್ವಾಮಿ ಸಿಎಂ ಅಂತ ಕಾಂಗ್ರೆಸ್ ಅವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡೋ ಭರವಸೆ ಕೊಟ್ಟಿದ್ದರು. ಅದರಂತೆ ಕುಮಾರಸ್ವಾಮಿ ಸಾಲಮನ್ನಾ ಮಾಡಿದರು. 14 ತಿಂಗಳಲ್ಲಿ ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ 11 ಸಾವಿರ ರೈತರ ಸಾಲಮನ್ನಾ ಮಾಡಿದ್ದಾರೆ. ಕುಮಾರಸ್ವಾಮಿ ಯಾವುದೇ ಜಾತಿ, ಧರ್ಮ ನೋಡಿ ಸಾಲಮನ್ನಾ ಮಾಡಿಲ್ಲ. ಕುಮಾರಸ್ವಾಮಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.