ವಿಜಯಸಾಕ್ಷಿ ಸುದ್ದಿ, ರೋಣ: ಎಚ್‌ಪಿವಿ ಲಸಿಕೆಯನ್ನು ಹೆಣ್ಣು ಮಕ್ಕಳು ತಮ್ಮ ಸೌಭಾಗ್ಯ ಎಂದು ಪರಿಗಣಿಸಿ ಪಡೆಯಬೇಕು ಎಂದು ಚಿಕ್ಕ ಮಕ್ಕಳ ವೈದ್ಯೆ ಡಾ. ಮಧು ರೆಡ್ಡೆರ ಹೇಳಿದರು.
ಅವರು ಮಂಗಳವಾರ ಆರ್‌ಜಿಎಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಮಾತೋಶ್ರೀ ಬಸಮ್ಮ ಸಂಗನಗೌಡ್ರ ಪಾಟೀಲರ 21ನೇ ಪುಣ್ಯ ಸ್ಮರಣೆ ನಿಮಿತ್ತ ಜರುಗಿದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಉಚಿತ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಚ್‌ಪಿವಿ ಲಸಿಕೆಯನ್ನು 9ರಿಂದ 14 ಮತ್ತು 15ರಿಂದ 19 ವರ್ಷದಯೊಳಗಿನ ಹೆಣ್ಣು ಮಕ್ಕಳು ಪಡೆಯುವುದು ಬಹಳ ಮುಖ್ಯವಾಗಿದೆ. ಕಾರಣ, ಈ ಲಸಿಕೆ ಗರ್ಭ ಕ್ಯಾನ್ಸರ್ ಸೇರಿದಂತೆ ಇತರೆ ರೋಗಗಳನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಪಾಲಕರು ಭಯ ಪಡದೆ ತಮ್ಮ ಮಕ್ಕಳಿಗೆ ಲಸಿಕೆ ಪಡೆಯಲು ಪ್ರೋತ್ಸಾಹಿಸಬೇಕು ಎಂದರು.
ಕೇAದ್ರ ಸರಕಾರ ಸಹ ಎಚ್‌ಪಿವಿ ಲಸಿಕೆಯನ್ನು ವಿತರಿಸುವ ಚಿಂತನೆ ನಡೆಸಿದ್ದು ಸ್ವಾಗತರ್ಹವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಪ್ರಥಮ ಎನ್ನುವಂತೆ ರೋಣ ತಾಲೂಕಿನಲ್ಲಿ ಶಾಸಕ ಜಿ.ಎಸ್. ಪಾಟೀಲ ಉಚಿತವಾಗಿ ಎಚ್‌ಪಿವಿ ಲಸಿಕೆಯನ್ನು ನೀಡುತ್ತಿರುವುದು ಸ್ಮರಣೀಯವಾಗಿದೆ. ಕಾರಣ, ಎಚ್‌ಪಿವಿ ಲಸಿಕೆ ಬಡವರಿಗೆ ನಿಲುಕುವಂತಿಲ್ಲ ಎಂಬುದನ್ನು ಮನಗಂಡಿರುವ ಶಾಸಕರು ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸ್ವತಃ ಲಸಿಕೆಯನ್ನು ವಿತರಣೆ ಮಾಡುತ್ತಿರುವುದು ಸ್ವಾಗತರ್ಹವಾಗಿದೆ ಎಂದರು.
ಡಾ. ಎಸ್.ಬಿ. ಲಕ್ಕೋಳ ಮಾತನಾಡಿ, ಎಚ್‌ಪಿವಿ ಲಸಿಕೆ ಬಗ್ಗೆ ದೇಶದ ಖ್ಯಾತ ವೈದ್ಯರು ಚರ್ಚೆ ನಡೆಸಿ, ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಬಹು ಮುಖ್ಯ ಲಸಿಕೆ ಎಂದು ಖಚಿತಪಡಿಸಿದ್ದಾರೆ. ಆದರೆ, ಲಸಿಕೆಯು 2300ರಿಂದ 15 ಸಾವಿರದವರೆಗೆ ಬೆಲೆ ಬಾಳುತ್ತದೆ. ಇಂತಹ ಲಸಿಕೆಯನ್ನು ಉಚಿತವಾಗಿ ನೀಡುವುದು ಸಾಧ್ಯವೇ ಎಂಬ ಅಭಿಪ್ರಾಯವಿದೆ. ಶಾಸಕ ಜಿ.ಎಸ್. ಪಾಟೀಲರು, ಮತಕ್ಷೇತ್ರದ ಹೆಣ್ಣು ಮಕ್ಕಳು ಆರೋಗ್ಯವಾಗಿರಬೇಕು ಎಂಬ ಉದ್ದೇಶದಿಂದ ಎಲ್ಲ ಹೆಣ್ಣು ಮಕ್ಕಳಿಗೂ ಎಚ್‌ಪಿವಿ ಲಸಿಕೆಯನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಖನಿಜ ನಿಗಮದ ಅಧ್ಯಕ್ಷರು, ಶಾಸಕರಾದ ಜಿ.ಎಸ್. ಪಾಟೀಲ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಬಸ್ಸಮ್ಮ ಕೊಪ್ಪದ, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಡಾ. ಕೆ.ಬಿ. ಧನ್ನೂರ, ಡಾ. ಬಾಕಳೆ, ಡಾ. ಶಕೀಲಅಹ್ಮದ ಕುಂದರಗಿ, ಡಾ. ಬಿ.ಎಸ್. ಭಜಂತ್ರಿ, ಡಾ. ಐ.ಬಿ. ಕೊಟ್ಟೂರಶೆಟ್ಟರ, ಡಾ. ಬಾನಿ ಮುಂತಾದವರು ಉಪಸ್ಥಿತರಿದ್ದರು. ಯೂಸುಫ್ ಇಟಗಿ ಸ್ವಾಗತಿಸಿ ನಿರೂಪಿಸಿದರು.
ಇಂದು ಸಾಂಕೇತಿಕವಾಗಿ ಎಚ್‌ಪಿವಿ ಲಸಿಕೆ ವಿತರಣೆ ಮಾಡಲಾಗಿದ್ದು, ರೋಣ, ಗಜೇಂದ್ರಗಡ ತಾಲೂಕು ಸೇರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆಯನ್ನು ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಡಲಾಗುವುದು. ಪಾಲಕರು ಭಯ ಪಡದೆ ತಮ್ಮ ಮಕ್ಕಳ ಮುಂದಿನ ಆರೋಗ್ಯದ ದೃಷ್ಟಿಯಿಂದ ಲಸಿಕೆಯನ್ನು ಪಡೆಯುವಂತೆ ಪ್ರೋತ್ಸಾಹಿಸಬೇಕು.
– ಜಿ.ಎಸ್. ಪಾಟೀಲ.
ಶಾಸಕರು, ರೋಣ.