ಹಾವೇರಿ:- ಜಾತಿ ಜನಗಣತಿ ವರದಿಯಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಿಸುವ ಷಡ್ಯಂತ್ರ ನಡೆದಿದೆ ಎಂಬ ಆರೋಪದ ವಿಚಾರವಾಗಿ ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿಯು ಯಾವುದೇ ಒಂದು ಸಮಾಜದ ಪರ ಅಥವಾ ವಿರೋಧ ನಿರ್ಣಯ ಮಾಡುವುದಲ್ಲ. ಇದರ ಜವಾಬ್ದಾರಿಯು ಸಿಎಂ ಹಾಗೂ ಪ್ರಧಾನಿಯವರ ಮೇಲೂ ಇದೆ ಎಂದು ತಿಳಿಸಿದರು.
75 ವರ್ಷ ಆಯ್ತು, ಜಾತಿ ವಿಚಾರವಾಗಿ ರಾಜಕಾರಣ ಮಾಡುವುದರಲ್ಲಿ ಅರ್ಥ ಇಲ್ಲ. ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಯಾರು ಹಿಂದುಳಿದಿದ್ದಾರೋ ಅವರಿಗೆ ಆದ್ಯತೆ ಕೊಡಲೇಬೇಕು. ಅದು ಯಾವುದೇ ಜಾತಿ ಇರಲಿ. ಇಂದಿನ ಮಟ್ಟಿಗೆ ಆ ವಿಚಾರ ಕೂಡಾ ಪ್ರಸ್ತುತವಾಗಿದೆ ಎಂದರು.
ಜಾತಿ ಗಣತಿ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಅಂಗೀಕಾರ ಮಾಡುವ ಬಗ್ಗೆ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಎಲ್ಲರ ಅಭಿಪ್ರಾಯ ಆಧರಿಸಿಯೇ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.