ಗದಗ:- ಇಲ್ಲಿನ ನಗರಸಭೆಯ ನೂರಾರು ಕೋಟಿ ಮೌಲ್ಯದ ಆಸ್ತಿ ಲೂಟಿ ಸಂಚು ಬಟಾ ಬಯಲಾಗಿದ್ದು, ಗದಗ ನಗರಸಭೆ ಮಾಜಿ ಅಧ್ಯಕ್ಷೆ, ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ವಿರುದ್ಧ ಇದೀಗ FIR ದಾಖಲಾಗಿದೆ.
ನಕಲಿ ಠರಾವು ಸೃಷ್ಠಿಸಿ, ಪೌರಾಯುಕ್ತರ ನಕಲಿ ಸಹಿ ಮಾಡಿ ಖಾಸಗಿ ವ್ಯಕ್ತಿಗಳಿಗೆ ಲೀಜ್ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಹಿಂದಿನ ಪ್ರಭಾರಿ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಅವರು ದೂರು ದಾಖಲಿಸಿದ್ದಾರೆ.
ಎ1 ಆರೋಪಿಯಾಗಿ ಖಾಸಗಿ ವ್ಯಕ್ತಿ ವಿಜಯಲಕ್ಷ್ಮಿ ಶಿಗ್ಲಿಮಠ ಹಾಗೂ ಎ2 ಆರೋಪಿಯಾಗಿ ಸೆಕ್ರೆಟರಿ ದಿ. ಕಾಟನ್ ಮಾರ್ಕೆಟ್ ವರ್ಕ್ಸ್ ಓನರ್ಸ್ ಅಸೋಸಿಯೇಷನ್ ಗದಗ ಸೇರಿದಂತೆ ಇತರರ ವಿರುದ್ಧವೂ ದೂರು ದಾಖಲಿಸಿದ್ದಾರೆ.
ಆರೋಪಿಗಳು ನಗರಸಭೆಯ ನೂರಾರು ಕೋಟಿಯ 54 ವಕಾರಸಾಲು ಆಸ್ತಿ ಕಬಳಿಸುವ ದುರುದ್ದೇಶ ಹೊಂದಿದ್ದಾರೆ. ಆರೋಪಿ 2 ಸೆಕ್ರೆಟರಿ ದಿ. ಕಾಟನ್ ಮಾರ್ಕೆಟ್ ವರ್ಕ್ಸ್ ಓನರ್ಸ್, ಅಸೋಸಿಯೇಷನ್ ಗದಗಗೆ 54 ಆಸ್ತಿ ಲೀಜ್ ನೀಡಲು ನಕಲಿ ಠರಾವು ಸೃಷ್ಠಿ ಮಾಡಲಾಗಿದೆ. 26-10-23 ರಂದು ನಗರಸಭೆಗೆ ಆರೋಪಿ ನಂಬರ್-2 ಪತ್ರ ನೀಡಿದ್ದಾರೆ.
09-02-24 ರಂದು ಸಾಮಾನ್ಯ ಸಭೆ ಜರುಗಿದೆ. ಆ ಸಭೆಯಲ್ಲಿ ಠರಾವು ನಂಬರ 378 ಪಾಸಾಗಿದೆ ಅಂತ ನಕಲಿ ದಾಖಲೆ ಸೃಷ್ಠಿ ಮಾಡಿದ್ದಾರೆ. ಅದರಂತೆ ಎಲ್ಲ ಆಸ್ತಿ ಅನುಭೋಗದಾರರಿಗೆ ಕಬ್ಜೆ ನೀಡಲಾಗಿದೆ ಅಂತ ಸುಳ್ಳು ಠರಾವು ಸೃಷ್ಟಿ ಮಾಡಲಾಗಿದೆ. 22-07-24 ರಂದು ಎಲ್ಲ ಅನುಭೋಗದಾರರಿಗೆ ಕಬ್ಜ್ ನೀಡಿದೆ ಅಂತ ಖೊಟ್ಟಿ ಪತ್ರ ಸೃಷ್ಠಿಸಿ ವಂಚಿಸಲಾಗಿದೆ. ನಕಲಿ ಪತ್ರಕ್ಕೆ ನಗರಸಭೆ ಆಯುಕ್ತರ ನಕಲಿ ಸಹಿ ಮಾಡಲಾಗಿದ್ದು, ಈ ಮೂಲಕ ಸರ್ಕಾರಕ್ಕೆ ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ನಕಲಿ ಠರಾವಿಗೆ ಆಗಿನ ಅಧ್ಯಕ್ಷೆ ಸಹಿ ಹಾಕಿರುವ ಆರೋಪ ಕೇಳಿ ಬಂದಿದ್ದು, ಅನುಮೋದನೆ, ಸೂಚಕರಾಗಿ ಬಿಜೆಪಿ ಸದಸ್ಯರಾದ ಅನಿಲ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ಸಹಿ ಮಾಡಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ನಗರಸಭೆ ಆಸ್ತಿ ಹಗರಣ ಇದೀಗ ಭಾರಿ ಸಂಚಲನ ಮೂಡಿಸಿದೆ.
ದೂರಿನ ಹಿನ್ನೆಲೆ ಮಾಜಿ ಅಧ್ಯಕ್ಷೆ, ಸದಸ್ಯರು, ಲೀಜ್ ದಾರರಿಗೆ ನಡುಕು ಶುರುವಾಗಿದೆ. ಅಲ್ಲದೇ ಈ ಹಿಂದಿನ ಬಿಜೆಪಿ ಆಡಳಿತದ ವಿರುದ್ಧ ಅವಳಿ ನಗರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.