ಹಾಸನ:- ಹಾಸನ ಹೊರವಲಯದ ಗೆಂಡೆಕಟ್ಟೆ ಫಾರೆಸ್ಟ್ ಬಳಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹಿನ್ನೆಲೆ ನೇಣು ಬಿಗಿದುಕೊಂಡು ಪೊಲೀಸ್ ಕಾನ್ಸ್‌ಟೇಬಲ್ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ 38 ವರ್ಷದ ನಟೇಶ್ ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್‌ಟೇಬಲ್. 2008ನೇ ಸಾಲಿನಲ್ಲಿ ನಾಗರಿಕ ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದರು. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ನಟೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 3 ತಿಂಗಳಿನಿಂದ ಮೂಳೆ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ನಟೇಶ್ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ಒಂದು ವಾರದಿಂದ ನಟೇಶ್ ಹಾಸನ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬುಧವಾರ ಸಂಜೆ ಆಸ್ಪತ್ರೆಯಿಂದ ಕಾಣೆಯಾಗಿದ್ದ ನಟೇಶ್, ಗೆಂಡೆಕಟ್ಟೆ ಅರಣ್ಯ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮುಖ್ಯಪೇದೆಯಾಗಿ ಮುಂಬಡ್ತಿ ಪಡೆದಿದ್ದ ನಟೇಶ್ ಹೊಳೆನರಸಿಪುರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.