ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಭಾರತ ದೇಶವು ಸಂವಿಧಾನವನ್ನು ಅಳವಡಿಸಿಕೊಂಡು ಇಂದಿಗೆ 75 ವರ್ಷಗಳಾದವು. ಪ್ರತಿವರ್ಷ ಈ ದಿನವನ್ನು ರಾಷ್ಟ್ರೀಯ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಹಿರಿಯ ಶಿಕ್ಷಕ ಬಸವರಾಜ ಗರ್ಜಪ್ಪನವರ ಹೇಳಿದರು.
ಇಲ್ಲಿಯ ಲಕ್ಕುಂಡಿ ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸಂವಿಧಾನ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2015ರವರೆಗೆ ಈ ದಿನವನ್ನು ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತಿತ್ತು. ಆದರೆ ಭಾರತ ಸರಕಾರವು 2015ರಲ್ಲಿ ಗಜೆಟ್ ಅಧಿಸೂಚನೆಯ ಮೂಲಕ ನವೆಂಬರ್ 26ನ್ನು ಸಂವಿಧಾನ ದಿನವೆಂದು ಘೋಷಿಸಿತು. ಕಾನೂನು ದಿನ ಮತ್ತು ಸಂವಿಧಾನ ದಿನ ಈ ಎರಡರ ಉದ್ದೇಶವೂ ಒಂದೇ ಆಗಿದೆ ಎಂದರು.
ಶಿಕ್ಷಕಿ ರಫಿಯಾ ದಂಡಿನ ಅವರು ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ ಸಂವಿಧಾನ ಪ್ರಸ್ತಾವನೆಯ ವಾಚನ ಮಾಡಿಸಿದರು. ಮಕ್ಕಳಿಗೆ ಸಂವಿಧಾನ ಕುರಿತಾದ ಸ್ಪರ್ಧೆಗಳು ನಡೆದವು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಆರ್.ಬಿ. ಬರದ್ವಾಡ, ಅರ್ಜುನ ಚಲವಾದಿ, ಪಿ.ಬಿ. ಬರದ್ವಾಡ, ಎ.ಎಂ. ದಂಡಿನ, ಲಕ್ಷ್ಮೀ ಗರ್ಜಪ್ಪನವರ, ಅಂಬುಜಾ ಕುಲಕರ್ಣಿ ಇದ್ದರು.
ಗ್ರಾಮ ಪಂಚಾಯಿತಿ, ಬಾಲಕಿಯರ ಸರಕಾರಿ ಪ್ರೌಢಶಾಲೆ, ಸರಕಾರಿ ಮಾದರಿ ದ್ವಿಭಾಷಾ ಪ್ರಾಥಮಿಕ ಶಾಲೆ, ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ, ಕೆ.ಜಿ.ಎಸ್. ಸರಕಾರಿ ಪ್ರಾಥಮಿಕ ಉರ್ದು ಶಾಲೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಮಾರುತಿ ನಗರ, ಬಿ.ಎಚ್. ಪಾಟೀಲ ಪ್ರೌಢಶಾಲೆಯಲ್ಲಿ ಸಂವಿಧಾನ dienವನ್ನು ಆಚರಿಸಲಾಯಿತು.


