ವಿಜಯಸಾಕ್ಷಿ ಸುದ್ದಿ, ನರೇಗಲ್ : ಭಾರತದ ಸಂವಿಧಾನ ಒಂದು ಪವಿತ್ರ ಗ್ರಂಥವಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದ ಸಂವಿಧಾನ ಎಲ್ಲರ ಒಳಿತು ಬಯಸುವ ಸರ್ವಶ್ರೇಷ್ಠ ಕೃತಿಯಾಗಿದೆ.
ಎಲ್ಲರೂ ಸಂವಿಧಾನವನ್ನು ಓದಿ ಮನದಟ್ಟು ಮಾಡಿಕೊಳ್ಳಬೇಕು ಎಂದು ಉಪನ್ಯಾಸಕ ಶಿವಾನಂದ ಗೋಗೇರಿ ಹೇಳಿದರು.
ಸ್ಥಳೀಯ ಕೆಎಸ್‌ಎಸ್ ಪಿಯುಸಿ ಕಾಲೇಜಿನಲ್ಲಿ ಗೃಹರಕ್ಷಕ ದಳದ ಆಶ್ರಯದಲ್ಲಿ ನಡೆದ ಸಂವಿಧಾನ ಓದು ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನವು ಯಾವುದೇ ಜಾತಿ, ಮತ, ಧರ್ಮ ಬೇಧವಿಲ್ಲದೆ ಎಲ್ಲ ನಾಗರಿಕರಿಗೆ ಅನ್ವಯವಾಗುವ ಪವಿತ್ರ ಗ್ರಂಥವಾಗಿದ್ದು, ಸಮಾಜದ ಪ್ರತಿಯೊಬ್ಬ ನಾಗರಿಕರಿಗೆ ಅನ್ವಯವಾಗುವ ಹಕ್ಕು ಮತ್ತು ಕರ್ತವ್ಯಗಳನ್ನು ಒಳಗೊಂಡಿದೆ. ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂಬ ಮೂರು ಅಂಗಗಳಿಂದ ಕೂಡಿದ್ದು, ಪ್ರಜೆಗಳಿಗೆ ಸೂಕ್ತ ಹಕ್ಕು, ಕರ್ತವ್ಯ ಮತ್ತು ನ್ಯಾಯವನ್ನು ಸಂವಿಧಾನ ಒದಗಿಸಲಿದೆ. ಸಂವಿಧಾನ ಕಾದಂಬರಿ, ಕವಿತೆಯಲ್ಲ ಒಂದು ಪವಿತ್ರ ಗ್ರಂಥವಾಗಿದ್ದು, ದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಅಂತಹ ಮಹಾನ್ ಗ್ರಂಥವನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು ಎಂದರು.
ಘಟಕಾಧಿಕಾರಿ ಸುರೇಶ ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೃಹರಕ್ಷಕರಾದ ಪಿ.ಎಸ್. ಸಾಬಳೆ, ಪಿ.ಕೆ. ಹಡಪದ, ಶರಣಪ್ಪ ಬೇಲೇರಿ, ವಿರೂಪಾಕ್ಷಪ್ಪ ಇಟಗಿ, ನಾಗಪ್ಪ ತಳವಾರ, ಶಿವಪ್ಪ ಮುಶಿಗೇರಿ, ಕೆಂಚಪ್ಪ ಹಾಳಕೇರಿ, ಮಂಜುನಾಥ ಕಡೆತೋಟದ, ಅರುಣ ಕುರುಡಗಿ ಸೇರಿದಂತೆ ಗೃಹ ರಕ್ಷಕ ಸಿಬ್ಬಂದಿಗಳು ಇದ್ದರು.