ಮೂತ್ರಾಲಯ ನಿರ್ಮಿಸಿ, ಬೀದಿ ದೀಪ ವ್ಯವಸ್ಥೆ ಮಾಡಿ

0
Spread the love

ಬಜೆಟ್ ಪೂರ್ವಭಾವಿ ಸಭೆಯಲ್ಲಿ ಬೇಡಿಕೆಗಳ ಮಹಾಪೂರ..

Advertisement

ಗದಗ: ನಗರದ ಜನದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿ ಮೂತ್ರಾಲಯ ನಿರ್ಮಿಸಿ, ಸುಗಮ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಕುಡಿಯುವ ನೀರು, ಬೀದಿ ದೀಪ ವ್ಯವಸ್ಥೆ ಒದಗಿಸಿ, ನಗರಸಭೆ ಸಂಯುಕ್ತ ಪ.ಪೂ ಕಾಲೇಜು ಅಭಿವೃದ್ಧಿಗೊಳಿಸಿ…ಹೀಗೆ ಹತ್ತು ಹಲವು ಒತ್ತಾಯಗಳು, ಬೇಡಿಕೆಗಳು ನಗರಸಭೆಯಲ್ಲಿ ತೂರಿ ಬಂದವು.
2024-25ನೇ ಸಾಲಿನ ಆಯ-ವ್ಯಯ ಮಂಡಿಸುವ ಮುನ್ನ ನಗರಸಭೆ ಅಧ್ಯಕ್ಷೆ ಉಷಾ ದಾಸರ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಎರಡನೇ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಘ-ಸಂಸ್ಥೆಗಳ ಮುಖಂಡರು, ಹಿರಿಯರು ವಿವಿಧ ಬೇಡಿಕೆಗಳನ್ನು ಮಂಡಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಗದಗ ಜಿಲ್ಲಾ ಸ್ಲಂ ಹೋರಾಟ ಸಮಿತಿಯ ಇಮ್ತಿಯಾಜ್ ಮಾನ್ವಿ, ಅವಳಿ ನಗರದಲ್ಲಿ 48 ಘೋಷಿತ ಹಾಗೂ 30ಕ್ಕೂ ಅಧಿಕ ಅಘೋಷಿತ ಕೊಳಚೆ ಪ್ರದೇಶದ ಅಭಿವೃದ್ಧಿಗೆ ನಗರಸಭೆ ಆಯ-ವ್ಯಯದಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದರಲ್ಲದೆ, ನಾನೂ ಕಳೆದ ಹಲವು ವರ್ಷಗಳಿಂದ ನಗರಸಭೆ ಆಯ-ವ್ಯಯದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆದರೆ, ನಮ್ಮ ಸಲಹೆಗಳಿಗೆ ಆದ್ಯತೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಲಿತ ಮುಖಂಡ ಸತೀಶ ಹೂಲಿ ಮಾತನಾಡಿ, ಅವಳಿ ನಗರದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಭೂಬಾಡಿಗೆ ಪಡೆಯಲು ಹಿಂದೆಲ್ಲ ಟೆಂಡರ್ ಕರೆದು, ಬೀದಿ ಬದಿ ವ್ಯಾಪಾರಿಗಳಿಂದ ಸಂಗ್ರಹಿಸಿದ ಹಣದಲ್ಲಿ ನಿಗದಿತ ಪಾಲನ್ನು ನಗರಸಭೆಗೆ ಭರಿಸುತ್ತಿದ್ದರು. ಆದರೆ, ಇಂದು ಟೆಂಡರ್ ರದ್ದಾಗಿದ್ದರೂ ಬೀದಿ ಬದಿ ವ್ಯಾಪಾರಸ್ಥರಿಂದ ಹಣ ಸಂಗ್ರಹಿಸುವುದು ಮಾತ್ರ ನಿಂತಿಲ್ಲ. ಹಾಗಾದರೆ ಆ ಹಣ ಎಲ್ಲಿ ಹೋಗುತ್ತದೆ ಎಂಬುದರ ಬಗ್ಗೆ ಗಮನ ಹರಿಸಬೇಕು ಎಂದರು.

ನಗರಸಭೆ ಮಾಲೀಕತ್ವದ ಮಳಿಗೆಗಳ ಬಾಡಿಗೆ ಬಾಕಿ ಇದ್ದು, ಈ ಬಗ್ಗೆ ವಸೂಲಿ ಆಂದೋಲನ ಆರಂಭಿಸಬೇಕು. ಈ ಮೂಲಕ ಬಂದ ಹಣವನ್ನು ಅವಳಿ ನಗರದ ಅಭಿವೃದ್ಧಿಗೆ ಬಳಸುವಂತೆ ಸತೀಶ ಹೂಲಿ ಸಲಹೆ ನೀಡಿದರು.

ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಯುವ ಘಟಕದ ಗದಗ ಜಿಲ್ಲಾಧ್ಯಕ್ಷ ಗಿರೀಶ ಕುಲಕರ್ಣಿ ಮಾತನಾಡಿ, ಬ್ರಾಹ್ಮಣ ಸಮಾಜದ ಸ್ಮಶಾನ ಅಭಿವೃದ್ಧಿ ಹಾಗೂ ಅಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.

ಗದಗ ಜಿಲ್ಲಾ ಆಟೋ ಚಾಲಕ-ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ, ಅವಳಿ ನಗರದಲ್ಲಿ ಇರುವ ಆಟೋ ಸ್ಟ್ಯಾಂಡ್‌ಗಳಿಗೆ ಮೇಲ್ಛಾವಣಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ತೋಂಟದಾರ್ಯ ಮಠದ ಜಾತ್ರೆ ವೇಳೆ ರಥಬೀದಿಯ ಎರಡೂ ಬದಿ ತೆರೆಯುವ ತಾತ್ಕಾಲಿಕ ಮಳಿಗೆ ನಿರ್ಮಾಣಕ್ಕೆ ಕೋಟಿಗಟ್ಟಲೆ ಮೊತ್ತದ ಟೆಂಡರ್ ಪಡೆದು, ಆ ಹಣವನ್ನು ಮಠದವರು ಪಡೆಯುತ್ತಿದ್ದಾರೆ. ಅದರ ಬದಲು ನಗರಸಭೆಯವರು ಅದನ್ನು ಟೆಂಡರ್ ಕರೆದು, ಆದಾಯವನ್ನೂ ನಗರಸಭೆಯೇ ಪಡೆಯಬೇಕು ಎಂದು ಸಲಹೆ ನೀಡಿದರು.

ಮಹಿಳಾ ಶೌಚಾಲಯ ನಿರ್ಮಿಸಬೇಕು, ಹೊಸ ಬಸ್ ನಿಲ್ದಾಣ ಬಳಿಯ ಅಂಬೇಡ್ಕರ್ ವೃತ್ತದ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು, ಪತ್ರಕರ್ತರಿಗೆ ಆರೋಗ್ಯ ಸೌಲಭ್ಯಕ್ಕೆ ಆಯ-ವ್ಯಯದಲ್ಲಿ ಅನುದಾನ ಮೀಸಲಿಡಬೇಕು ಎಂಬ ಮನವಿಗಳು ಕೇಳಿಬಂದವು.

ಉಳಿದಂತೆ, ನಗರಸಭೆಯ ಸಂಯುಕ್ತ ಪ.ಪೂ ಕಾಲೇಜು ಅಭಿವೃದ್ಧಿಯ ಕುರಿತು ಹೆಚ್ಚಿನವರು ಪ್ರಸ್ತಾಪ ಮಾಡಿದರು. ಸಭೆಯಲ್ಲಿ ಅಬ್ದುಲ್‌ರೆಹಮಾನ ಹುಯಿಲಗೋಳ, ರಾ.ದೇ. ಕಾರಭಾರಿ, ರಾಘವೇಂದ್ರ ಹಬೀಬ, ಶಿವಾನಂದ ತಮ್ಮಣ್ಣವರ, ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಬಾಕಳೆ ಸೇರಿ ಅನೇಕರು ಭಾಗವಹಿಸಿದ್ದರು.

ಆರ್ಥಿಕತೆಗನುಗುಣವಾಗಿ ಆಯ-ವ್ಯಯ

ಅವಳಿ ನಗರದಲ್ಲಿ ನಗರಸಭೆ ಮಾಲೀಕತ್ವದ ಮಳಿಗೆಗಳ ಬಾಡಿಗೆ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಗರಸಭೆಯಲ್ಲಿ ಲಭ್ಯವಿರುವ ಆರ್ಥಿಕತೆಗೆ ಅನುಗುಣವಾಗಿ ಯೋಜನೆ ರೂಪಿಸಲಾಗುವುದು. ಅಗತ್ಯ ಮೂಲಸೌಕರ್ಯ, ಕುಡಿಯುವ ನೀರು, ಬೀದಿದೀಪಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

-ಉಷಾ ಮಹೇಶ್ ದಾಸರ. ನಗರಸಭೆ ಅಧ್ಯಕ್ಷೆ


Spread the love

LEAVE A REPLY

Please enter your comment!
Please enter your name here