ವಿಜಯಸಾಕ್ಷಿ ಸುದ್ದಿ, ರೋಣ: ರೋಣ ತಾಲೂಕು ಹೆಚ್ಚಿನ ರೈತರನ್ನು ಹೊಂದಿದ್ದು, ಈ ದಿಶೆಯಲ್ಲಿ 10 ಕೋಟಿ ರೂಗಳ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಬುಧವಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ವಿಶೇಷಚೇತನರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.
ರೈತರು ಬೆಳೆದ ಬೆಳೆಗಳನ್ನು ಸಂರಕ್ಷಣೆ ಮಾಡಲು ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅಣಿಯಾಗಿದ್ದು, ರೋಣ ಪಟ್ಟಣದ ಸೂಡಿ ಕ್ರಾಸ್‌ನಿಂದ ಶಿವಾನಂದ ಮಠದವರೆಗೆ 3 ಕೋಟಿ 50 ಲಕ್ಷ ರೂ ವೆಚ್ಚದಲ್ಲಿ ಡಬಲ್ ಸಿಸಿ ರಸ್ತೆ, ಪಾದಚಾರಿ ರಸ್ತೆ ಸೇರಿ ಅಲಂಕಾರಿಕ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಪಟ್ಟಣದ ಜನತೆ ಅಭಿವೃದ್ಧಿಯ ದೃಷ್ಟಿಯಿಂದ ಸಹಕರಿಸಬೇಕು ಎಂದರು.
2 ಕೋಟಿ ರೂಗಳ ವೆಚ್ಚದಲ್ಲಿ ಸರಕಾರಿ ಪಿಯು ಕಾಲೇಜು ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಶೀಘ್ರವೇ ಕಟ್ಟಡ ಉದ್ಘಾಟನೆ ನೆರವೇರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು. ಮುಖ್ಯವಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ಕೆರೆಯ ಸೌಂದರ್ಯ ಹೆಚ್ಚಿಸಲು ಹೆಚ್ಚಿನ ಒತ್ತು ನೀಡಿ ಅನುದಾನವನ್ನು ಸಹ ಬಳಕೆ ಮಾಡಿದೆ. ವಿಪರ್ಯಾಸವೆಂದರೆ, ಜನರು ಅದರ ಸದ್ಬಳಕೆಗೆ ಮುಂದಾಗುತ್ತಿಲ್ಲ. ಇದರಿಂದ ತೀವ್ರ ಬೇಸರವಾಗಿದ್ದು, ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕವಾಗಿದೆ ಎಂದರು.
ವಿಶೇಷಚೇತನರ ಬಗ್ಗೆ ಬಾಯಿ ಮಾತಿನಿಂದ ಅನುಕಂಪ ತೋರಿದರೆ ಸಾಲದು. ಹೀಗಾಗಿ, ಶಾಸಕರ ಅನುದಾನದಲ್ಲಿ ಈ ಮೊದಲು 18 ಮತ್ತು ಈಗ ನಾಲ್ಕು ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿದೆ. ಇನ್ನು 8 ತ್ರಿಚಕ್ರ ವಾಹನಗಳಿಗೆ ಅನುದಾನ ಒದಗಿಸಲಾಗಿದ್ದು, ಅವುಗಳನ್ನು ಸಹ ವಿತರಿಸಲಾಗುವುದು. ಅಲ್ಲದೆ ವಿಶೇಷಚೇತನರು ವಾಹನಗಳ ಸೌಲಭ್ಯ ಪಡೆದು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ಅಕ್ಷಯ ಪಾಟೀಲ, ಮುತ್ತಣ್ಣ ಸಂಗಳದ, ಯೂಸುಪ್ ಇಟಗಿ, ಬಸವರಾಜ ಜಗ್ಗಲ, ಪ್ರಕಾಶ ಹಾಲಣ್ಣವರ ಸೇರಿದಂತೆ ಪುರಸಭೆಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಪಟ್ಟಣದ ಹೃದಯ ಭಾಗದಲ್ಲಿರುವ ಕೆರೆಯ ಸೌಂದರ್ಯವನ್ನು ಹೆಚ್ಚಿಸಿ ಅದನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು ಎನ್ನುವುದು ನನ್ನ ಮೊದಲ ಆದ್ಯತೆಯಾಗಿದೆ. ಕೆರೆಯ ಅಭಿವೃದ್ಧಿ ಕಾರ್ಯ ಮುಗಿಯುವ ತನಕ ಎರಡೂ ಬದಿಯಲ್ಲಿ ಗೇಟ್ ಅಳವಡಿಸಿ ಸಂಚಾರ ನಿಷೇಧಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಪಟ್ಟಣದ ಜನತೆ ಸಂಪೂರ್ಣ ಸಹಕಾರ ನಿಡಬೇಕು.
– ಜಿ.ಎಸ್. ಪಾಟೀಲ.
ಶಾಸಕರ, ರೋಣ.