ಬೆಂಗಳೂರು: ಕನ್ನಡದ ಖ್ಯಾತ ಕಾದಂಬಕಾರಿಕಾರ ಎಸ್ಎಲ್ ಭೈರಪ್ಪ ಅವರು ಸೆಪ್ಟೆಂಬರ್ 25ರ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಯಾಘಾತದಿಂದ ನಿಧನರಾದ್ರು. ಭೈರಪ್ಪ ನಿಧನ ಕನ್ನಡ ಸಾಹಿತ್ಯ ಲೋಕದ ದೊಡ್ಡ ಕೊಂಡಿಯೇ ಕಳಚಿದಂತಾಗಿದೆ.
ಭೈರಪ್ಪ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇರಿಸಲಾಗಿದ್ದು, ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ. ಅದರಂತೆ ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವ್ರು ಸಾಹಿತಿ ಭೈರಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಿದ್ರು. ಹೂಗುಚ್ಚ ಅರ್ಪಿಸಿ, ಒಂದು ಸುತ್ತು ಬಂದು ಕೈ ಮುಗಿದು ಹಿರಿಯ ಜೀವವನ್ನು ನೆನೆದಿದ್ದಾರೆ.
ನಂತರ ಮಾತನಾಡಿದ ಸಿಎಂ, ಭೈರಪ್ಪ ಅವರು ಹೆಚ್ಚಿನ ಸಮಯ ಮೈಸೂರಿನಲ್ಲೇ ಇದ್ದವರು. ಹೀಗಾಗಿ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.
ಅಪಾರ ಓದುಗರನ್ನ ಸಂಪಾದಿಸಿದವರು ಭೈರಪ್ಪನವರು. ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಅವರದ್ದು ಜಗತ್ ಪ್ರಸಿದ್ಧ ಆಗಿರುವಂತಹ ಕಾದಂಬರಿಗಳು. ಅವರ, ಕೆಲವು ಕಾದಂಬರಿಗಳನ್ನು ನಾನು ಓದಿದ್ದೇನೆ. ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಿದ್ದರಾಮಯ್ಯ ಹೇಳಿದರು.