70 ಲಕ್ಷ ರೂ ವೆಚ್ಚದಲ್ಲಿ ಗುರುಭವನದ ಮೇಲ್ಮಹಡಿ ನಿರ್ಮಾಣ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಶಿಕ್ಷಕರು ಅಕ್ಷರ ಜ್ಞಾನ ನೀಡಿದ ಪರಿಣಾಮ ನಾವೆಲ್ಲರೂ ಗೌರಯುತ ಸ್ಥಾನದಲ್ಲಿದ್ದೇವೆ. ಹೀಗಾಗಿ ಶಿಕ್ಷಕರ ದಿನಚಾರಣೆಯನ್ನು ಎಲ್ಲ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ಆಚರಿಸಬೇಕು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

Advertisement

ಅವರು ಮಂಗಳವಾರ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಶಿಕ್ಷಕರ ದಿನಚಾರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ತಾಲೂಕಿನ ಶಿಕ್ಷಕರಿಗೆ ಮಾತು ಕೊಟ್ಟಂತೆ ನನ್ನ ಅವಧಿಯಲ್ಲಿ ದೊಡ್ಡ ಪ್ರಮಾಣದ ಗುರುಭವನವನ್ನು ನಿರ್ಮಿಸಿ ಕೊಟ್ಟಿದ್ದು, ಈಗ ಮತ್ತೆ ಗುರುಭವನದ ಮೇಲ್ಮಹಡಿ ಕಟ್ಟಡಕ್ಕೆ 70 ಲಕ್ಷ ರೂಗಳ ಅನುದಾನವನ್ನು ಒದಗಿಸಲಾಗಿದೆ. ಶಿಕ್ಷಕರ ಬೇಡಿಕೆಯಂತೆ ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಲಾಗುವುದು ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ವಾಯ್.ಡಿ. ಗಾಣಿಗೇರ ಮಾತನಾಡಿ, ಸೆ 5ರಂದು ಈದ್ ಮಿಲಾದ್ ಹಬ್ಬ ಇರುವ ಕಾರಣ ದಿನಚಾರಣೆಯನ್ನು ಸೆ. 8ಕ್ಕೆ ನಿಗದಿ ಮಾಡಲಾಗಿದೆ. ಇದಕ್ಕೆ ಶಿಕ್ಷಣ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಸಮ್ಮತಿ ವ್ಯಕ್ತಪಡಿಸಿದ್ದಾರೆ. ನಮ್ಮ ಈ ಕಾರ್ಯಕ್ಕೆ ಶಾಸಕರು ಸಹ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವುದು ನಮಗೆ ಸಂತಸ ತಂದಿದೆ ಎಂದರು.

ತಹಸೀಲ್ದಾರ್ ನಾಗರಾಜ ಕೆ ಮಾತನಾಡಿ, ಸಮಾಜದಲ್ಲಿ ಶಿಕ್ಷಕ ಹುದ್ದೆಗೆ ತನ್ನದೇ ಆದ ಘನತೆಯಿದೆ. ಓರ್ವ ಶಿಕ್ಷಕ ತನ್ನ ಕೊಠಡಿಯ 40 ವಿದ್ಯಾರ್ಥಿಗಳನ್ನು ತಿದ್ದಿ ತೀಡುವ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಿಕೊಡುತ್ತಾನೆ. ಅಂತಹ ಮಹಾನ್ ಕಾರ್ಯದಲ್ಲಿ ತೊಡಗಿಕೊಂಡಿರುವ ಶಿಕ್ಷಕರ ದಿನಚಾರಣೆಯನ್ನು ಎಲ್ಲ ಇಲಾಖೆಗಳ ಅಧಿಕಾರಿಗಳು ಸೇರಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಡಾ. ಕೆ.ಬಿ. ಧನ್ನೂರ, ಮುತ್ತಣ್ಣ ಸಂಗಳದ, ವಿ.ಬಿ. ಸೋಮನಕಟ್ಟಿಮಠ, ಗಜೇಂದ್ರಗಡ ತಹಸೀಲ್ದಾರ ಕಿರಣಕುಮಾರ, ತಾ.ಪಂ ಇಒ ಚಂದ್ರೇಶಖರ ಕಂದಕೂರ, ಸಿಪಿಐ ಎಸ್.ಎಸ್. ಬಿಳಗಿ, ಅಕ್ಷರ ದಾಸೋಹಾಧಿಕಾರಿ ಆರ್.ಎಲ್. ನಾಯ್ಕರ, ನರೇಗಲ್ಲ ಪಿಎಸ್‌ಐ ಐಶ್ವರ್ಯ ನಾಗರಾಳ, ಗಜೇಂದ್ರಗಡ ಪಿಎಸ್‌ಐ ಪ್ರಕಾಶ, ಬಿಇಒ ಎ.ಎನ್. ಕಂಬೋಗಿ, ಎಂ.ಎ. ಫಣಿಬಂದ್, ಎ.ಕೆ. ಒಂಟಿ, ಮಹೇಶ ಕುರಿ, ಸಿ.ಕೆ. ಕೇಸರಿ, ಶಿಕ್ಷಕಿ ಕ್ಯಾತನಗೌಡ್ರ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.

ಆ.29ರಂದು ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಶಿಕ್ಷಕರ ದಿನಚಾರಣೆ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ. ದಿನಚಾರಣೆ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಶಿಕ್ಷಕರಿಗೂ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಊಟದ ವ್ಯವಸ್ಥೆಯನ್ನು ಸ್ವತಃ ನಾನೇ ಮಾಡುತ್ತೇನೆ. ಗುರುಭವನದ ಆವರಣದಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆಯನ್ನು ಸಹ ಮಾಡಲಾಗುವುದು. ಒಟ್ಟಿನಲ್ಲಿ ಕಾರ್ಯಕ್ರಮ ಯಶಸ್ವಿಯಾಗಬೇಕು.

– ಜಿ.ಎಸ್.ಪಾಟೀಲ.

ಶಾಸಕರು, ರೋಣ.


Spread the love

LEAVE A REPLY

Please enter your comment!
Please enter your name here