`ಒಬ್ಬ ತೃಪ್ತ ಗ್ರಾಹಕನು ಎಲ್ಲಕ್ಕಿಂತ ಉತ್ತಮ ತಂತ್ರವುಳ್ಳವನಾಗಿರುತ್ತಾನೆ’ ಎಂದು ಮೈಕೆಲ್ ಬೋಫ್ ಹೇಳಿದ್ದಾರೆ.
ಒಬ್ಬ ಗ್ರಾಹಕ ತನ್ನ ಬೇಕು-ಬೇಡಿಕೆಗಳ ವಸ್ತುಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ, ಗುಣಮಟ್ಟವನ್ನು ಖಾತ್ರಿ ಪಡಿಸಿಕೊಂಡು ತೆಗೆದುಕೊಂಡಾಗ ಆರ್ಥಿಕವಾಗಿ ಮುಂದೆ ಬರಲು ಸಾಧ್ಯ.ಈ ಸಂದರ್ಭದಲ್ಲಿ ಗ್ರಾಹಕ ಹಕ್ಕುಗಳು ನಮಗೆ ಬೆನ್ನೆಲುಬಾಗಿ ನಿಲ್ಲುತ್ತವೆ.ಹೀಗಾಗಿ ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು, ಮಾರುಕಟ್ಟೆಯಲ್ಲಿನ ದುರುಪಯೋಗದ ಬಗ್ಗೆ ಅರಿವು ಮೂಡಿಸಲು ಜಾಗತಿಕವಾಗಿ ಪ್ರತಿ ವರ್ಷ ಮಾರ್ಚ್ 15ರಂದು `ವಿಶ್ವ ಗ್ರಾಹಕ ಹಕ್ಕುಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ.
ಗ್ರಾಹಕರ ಚಳವಳಿಗೆ ಗೌರವ ಅರ್ಪಿಸುವುದು ಹಾಗೂ ಗ್ರಾಹಕರ ಮೂಲಭೂತ ಹಕ್ಕುಗಳನ್ನು ಪ್ರೋತ್ಸಾಹಿಸುವುದು ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜಾನ್ ಎಫ್ ಕೆನಡಿ ಮಾರ್ಚ್ 15, 1962ರಂದು ಗ್ರಾಹಕರ ಹಕ್ಕುಗಳ ಕುರಿತು ಯುಎಸ್ ಕಾಂಗ್ರೆಸ್‌ಗೆ ಮಾಡಿದ ಭಾಷಣದಿಂದಾಗಿ ವಿಶ್ವ ಗ್ರಾಹಕರ ದಿನ ಆಚರಣೆಗೆ ಬಂದಿದೆ. ಈ ರೀತಿ ಗ್ರಾಹಕರ ಹಕ್ಕುಗಳ ಬಗ್ಗೆ ಮಾತನಾಡಿದ ಮೊದಲ ವಿಶ್ವ ನಾಯಕ ಜಾನ್ ಎಫ್ ಕೆನಡಿ. ಆ ಬಳಿಕ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು 1983ರಿಂದ ಮಾರ್ಚ್15 ರಂದು ಆಚರಿಸಲಾಗುತ್ತಿದೆ.
ಹಣವನ್ನು ಪಾವತಿಸಿ ಅಥವಾ ಪಾವತಿಸುವ ವಾಗ್ದಾನದ ಮೇರೆಗೆ ಸರಕು ಅಥವಾ ಸೇವೆಗಳನ್ನು ಸ್ವಂತ ಅಥವಾ ಅನ್ಯರ ಉಪಯೋಗಕ್ಕಾಗಿ ಖರೀದಿಸುವವನನ್ನು ಗ್ರಾಹಕ ಎಂದು ಕರೆಯುತ್ತಾರೆ. ಆದರೆ ವ್ಯವಹಾರ ಉದ್ದೇಶಗಳಿಗೆ ಸರಕು ಮತ್ತು ಸೇವೆಗಳನ್ನು ಖರೀದಿಸುವವನು ಗ್ರಾಹಕನಾಗುವುದಿಲ್ಲ.
ಗ್ರಾಹಕರ ಹಕ್ಕುಗಳಲ್ಲಿ 8 ವಿಧಗಳನ್ನು ಗುರುತಿಸಬಹುದು. ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕು, ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವ ಹಕ್ಕು, ಆಯ್ಕೆಯ ಹಕ್ಕು, ಆಲಿಸುವ ಹಕ್ಕು, ಮೂಲಭೂತ ಅವಶ್ಯಕತೆಗಳನ್ನು ಪಡೆಯುವ ಹಕ್ಕು ಮತ್ತು ಮಾಲಿನ್ಯಮುಕ್ತ ಪರಿಸರವನ್ನು ಪಡೆಯುವ ಹಕ್ಕು.
ಯಾರು ದೂರು ದಾಖಲಿಸಬಹುದು?: ಈ ಕೆಳಕಂಡ ವ್ಯಕ್ತಿಗಳು ಸಂಬಂಧಿಸಿದ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಬಹುದು. ಒಬ್ಬ ಗ್ರಾಹಕ, ಯಾವುದೇ ನೊಂದಾಯಿತ ಗ್ರಾಹಕ ಸಂಘಟನೆ, ಗ್ರಾಹಕನ ವಾರಸುದಾರ (ಗ್ರಾಹಕನ ನಿಧನಾನಂತರ), ಒಂದೇ ರೀತಿಯ ಹಿತಾಸಕ್ತಿಯನ್ನು ಹೊಂದಿರುವ ಒಬ್ಬ ಅಥವಾ ಅನೇಕ ಗ್ರಾಹಕರು ಅಥವಾ ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರ.
ದೂರಿನಲ್ಲಿರಬೇಕಾದ ಪ್ರಮುಖ ಅಂಶಗಳು: ದೂರುದಾರರ ಹೆಸರು, ವಿಳಾಸ, ಮತ್ತು ದೂರಿನ ವಿವರ, ಎದುರು ಕಕ್ಷಿದಾರನ ಹೆಸರು, ವಿಳಾಸ, ಮತ್ತು ವಿವರ, ಯಾವ ಸಂದರ್ಭದಲ್ಲಿ ನ್ಯೂನತೆ ಸಂಬಂಧಿಸಿದ ಎಂಬುದರ ಬಗ್ಗೆ ಮಾಹಿತಿ, ದೂರಿಗೆ ಸಂಬಂಧಿಸಿದ ಮಾಹಿತಿಗಳನ್ನೊಳಗೊಂಡ ದಾಖಲೆಗಳು, ದೂರುದಾರ ಅಪೇಕ್ಷಿಸುವ ಪರಿಹಾರದ ವಿಧಗಳು ಇತ್ಯಾದಿ.
ಭಾರತದಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ 1986: ಗ್ರಾಹಕರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ 1986 ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದು ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ವ್ಯಾಪಾರಿ ಪದ್ಧತಿಗಳು ಹಾಗೂ ಇತರೆ ಶೋಷಣೆಯ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಾಯ್ದೆ ಸರಕು ಮತ್ತು ಸೇವೆಗಳ ವಿರುದ್ಧ ದೂರುಗಳಿದ್ದಲ್ಲಿ ಇತ್ಯರ್ಥಪಡಿಸಲು ಕಾಲಮಿತಿಯ ಷರತ್ತನ್ನು ವಿಧಿಸಿದೆ. ಗ್ರಾಹಕರ ಶೋಷಣೆಯ ವಿರುದ್ಧ ಕೇವಲ ಬಿಳಿಹಾಳೆಯಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ಈ ಕಾನೂನಿನನ್ವಯ ಜಿಲ್ಲಾ, ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ ಹಾಗೂ ರಾಜ್ಯಮಟ್ಟದಲ್ಲಿ ಗ್ರಾಹಕ ಹಿತರಕ್ಷಣಾ ಮಂಡಳಿಗಳನ್ನು ಸ್ಥಾಪಿಸಲಾಗಿದೆ.
ಗ್ರಾಹಕರ ಹಕ್ಕುಗಳ ಅನ್ವಯ ಮಾರುಕಟ್ಟೆಯಲ್ಲಿ ತನ್ನ ಸರಕಿನ ಮೇಲೆ ಮೋಸ, ವಂಚನೆ ಕಂಡುಬಂದರೆ ಗ್ರಾಹಕ ಸಂರಕ್ಷಣೆ ಕಾಯ್ದೆ ಪ್ರಕಾರವಾಗಿ ಗ್ರಾಹಕ ನ್ಯಾಯಾಲಯಗಳಿಗೆ ದೂರು ಸಲ್ಲಿಸಿ, ಪರಿಹಾರವನ್ನು ಪಡೆಯಬಹುದು. ಗ್ರಾಹಕರ ಹಕ್ಕುಗಳಿಗಾಗಿ ಆಚರಿಸುವ ಈ ದಿನದಂದು ಪ್ರಜ್ಞಾಪೂರ್ವಕ ಗ್ರಾಹಕರಾಗುವುದಾಗಿ ಪ್ರತಿಜ್ಞೆ ಮಾಡೋಣ. ವಿವೇಚನಾಶೀಲ ಗ್ರಾಹಕರಾಗಿ ನಮ್ಮ ಹಕ್ಕುಗಳನ್ನು ಬಳಸಿಕೊಳ್ಳೋಣ.
– ಬಸವರಾಜ ಎಮ್.ಯರಗುಪ್ಪಿ.
ಬಿಆರ್‌ಪಿ, ಶಿರಹಟ್ಟಿ- ಲಕ್ಷ್ಮೇಶ್ವರ.
ಗ್ರಾಹಕನಿಗೆ ದೊರೆಯುವ ಪರಿಹಾರಗಳು
ಗ್ರಾಹಕರ ಹಿತಾರಕ್ಷಣಾ ಕಾಯಿದೆ, 1986ರ ಪ್ರಕಾರ ಶೋಷಿತ ಗ್ರಾಹಕನಿಗೆ ಈ ಕೆಳಕಂಡ ಪರಿಹಾರಗಳು ದೊರೆಯುತ್ತವೆ.
* ಬದಲಿ ಸರಕನ್ನು ನೀಡುವಂತೆ ಒತ್ತಾಯ.
* ಸರಕಿನಲ್ಲಿರುವ ನ್ಯೂನತೆಯನ್ನು ನಿವಾರಿಸಿಕೊಳ್ಳುವುದು.
* ಸರಕಿನ ಮೌಲ್ಯವನ್ನು ವಾಪಸ್ಸು ಪಡೆಯುವುದು.
* ನಷ್ಟ ಪರಿಹಾರವನ್ನು ಪಡೆಯುವ ಅಥವಾ
* ಅನುಚಿತ ವ್ಯಾಪಾರಿ ಪದ್ದತಿಗಳನ್ನು ನಿಲ್ಲಿಸುವುದು.
* ಹಾನಿಕಾರಕ ಸರಕುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡುವುದು.
*ಹಾನಿಕಾರಕ ಸರಕುಗಳನ್ನು ಮಾರಾಟ ಮಾಡುದಂತೆ ನಿರ್ಬಂಧ ಹೇರುವುದು.