ಬೆಂಗಳೂರು ಗ್ರಾಮಾಂತರ: ಓವರ್‌ಟೇಕ್ ಮಾಡಲು ಹೋಗಿದ್ದ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬೃಹತ್ ಕಂಟೈನರ್ ಲಾರಿ ಹೈವೇಯಲ್ಲಿ ಉರುಳಿ ಬಿದ್ದ ಭಯಾನಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮುದುಗೆರೆ ಸಮೀಪ ನಡೆದಿದೆ.
ಅಪಘಾತದ ದೃಶ್ಯ ಸ್ಥಳೀಯ ಹೋಟೆಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮುಂದೆ ಸಾಗುತ್ತಿದ್ದ ಟಿಪ್ಪರ್ ಲಾರಿಯನ್ನು ಓವರ್‌ಟೇಕ್ ಮಾಡಲು ಹೋಗಿದಾಗ ಪಕ್ಕದಲ್ಲಿದ್ದ ಬೈಕ್‌ಗಳಿಗೆ ಸೈಡ್ ಕೊಡಲು ಯತ್ನಿಸಿದ ವೇಳೆ ಲಾರಿ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ರಸ್ತೆ ಬದಿ ನಿಂತಿದ್ದ ಕಾರಿನ ಮೇಲೆ ಲಾರಿ ಬೀಳುವುದು ಜಸ್ಟ್ ಮಿಸ್ ತಪ್ಪಿದ್ದು ಕಾರಿಗೆ ಸ್ವಲ್ಪ ತಗುಲಿದೆ. ಕಾರಿನಲ್ಲಿದ್ದವರು ಭಯಭೀತರಾಗಿ ವಾಹನದಿಂದ ಇಳಿದಿದ್ದಾರೆ.
ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಬಿಹಾರ ಮೂಲದ ಚಾಲಕ ಧರ್ಮೇಂದ್ರ ಹಾಗೂ ಕ್ಲೀನರ್ ಲಾಲ್ ಚಂದ್ ಗಾಯಗೊಂಡಿದ್ದು, ಅವರನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಲಾರಿಯಲ್ಲಿ ಪ್ಲಾಸ್ಟಿಕ್ ಪೈಪ್‌ಗಳನ್ನು ತುಂಬಿ ಮಧ್ಯಪ್ರದೇಶದ ಭೋಪಾಲ್‌ನಿಂದ ಹೊಸಕೋಟೆಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.



