ನಮ್ಮ ವ್ಯವಸ್ಥೆ ಸುಧಾರಿಸುವುದೆಂದು?!

0
Contamination by sewage water
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡು, 160 ವರ್ಷದ ಇತಿಹಾಸ ಹೊಂದಿರುವ ಗದುಗಿನ ದತ್ತಾತ್ರೇಯ ರಸ್ತೆಯಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.1ರ ಕಟ್ಟಡ ಇಂದಿಗೂ ಸುಸ್ಥಿತಿಯಲ್ಲಿದೆ. ಆದರೆ, ಮಳೆಗಾಲದಲ್ಲಿ ಮಾತ್ರ ಶಾಲಾ ಮಕ್ಕಳು ಶಾಲೆ ಪ್ರವೇಶಿಸಲೂ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಾರಣ, ಶಾಲೆಯ ಎದುರಿನ ರಸ್ತೆ. ಚರಂಡಿ ನೀರು ಶಾಲೆಯ ಆವಾರಕ್ಕೆ ನುಗ್ಗಿ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿರುವುದು ದುರ್ದೈವ.

Advertisement

ಇದೀಗ, ಮತ್ತೊಮ್ಮೆ ಇಂತಹುದೇ ಘಟನೆ ಮರುಕಳಿಸಿದೆ. ಜೋರು ಮಳೆ ಸುರಿದು, ಚರಂಡಿಗಳೆಲ್ಲಾ ತುಂಬಿ ಹರಿದು, ಇಡಿಯ ಪರಿಸರ ಚರಂಡಿಯ ಗಬ್ಬು ದುರ್ನಾತದಿಂದ ತುಂಬಿಹೋಗಿತ್ತು. ಶಾಲೆಯೊಳಗೆ ಕುಳಿತುಕೊಳ್ಳಲೂ ಸಾಧ್ಯವಾಗದಿದ್ದಾಗ, ಶಿಕ್ಷಕರು ವಿದ್ಯಾರ್ಥಿಗಳನ್ನು ಇದೇ ರಸ್ತೆಯಲ್ಲಿರುವ ಅಂಗಡಿಯ ಕಟ್ಟೆಯ ಮೇಲೆ ಕೂರಿಸಿ ಪಾಠ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಚರಂಡಿ ಬ್ಲಾಕ್ ಆಗಿ ಶಾಲೆಯ ರಸ್ತೆಯ ಸ್ಥಿತಿ ಅಯೋಮಯವಾಗಿದೆ. ವಿದ್ಯಾರ್ಥಿಗಳು ಶಾಲೆಯೊಳಗೆ ಪ್ರವೇಶಿಸಲೂ ಆಗದಂತಹ ಸಂದರ್ಭ ಮಳೆಗಾಲದಲ್ಲಿ ಎದುರಾಗುತ್ತದೆ. ಆದರೆ, ಮಕ್ಕಳನ್ನು ರಸ್ತೆಯ ಪಕ್ಕದ ಅಂಗಡಿಯ ಮೆಟ್ಟಿಲುಗಳ ಮೇಲೆ ಕೂರಿಸಿ ಪಾಠ ಮಾಡಿರುವುದು ಎಷ್ಟು ಸರಿ? ಇದರಿಂದ ಮಕ್ಕಳಿಗೇನಾದರೂ ತೊಂದರೆಯಾದರೆ ಯಾರು ಜವಾಬ್ದಾರಿ ಹೊರಬೇಕು ಎಂದು ಸಾರ್ವಜನಿಕರು ಶಿಕ್ಷಕರ ಬೇಜವಾಬ್ದಾರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contamination by sewage water

ಪ್ರತೀ ಮಳೆಗಾಲದಲ್ಲೂ ಚರಂಡಿ ತುಂಬಿ ಇದೇ ಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆ ನೀರು ಚರಂಡಿ ತುಂಬಿ ಶಾಲೆಯ ಆವರಣಕ್ಕೆ ನುಗ್ಗಿ, ವಿದ್ಯಾರ್ಥಿಗಳು ಕೂತು ಪಾಠ ಕೇಳಲೂ ಆಗದಂತಹ ದುರ್ವಾಸನೆ ಹರಡುತ್ತದೆ.

ಶಾಲಾ ಮಕ್ಕಳಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಹಲವಾರು ಬಾರಿ ಶಿಕ್ಷಣ ಇಲಾಖೆಗೆ ಹಾಗೂ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲಾ ಮಕ್ಕಳ ಪರದಾಟ ತಪ್ಪದಾಗಿದೆ.

Contamination by sewage water

ಈ ವಿಚಾರ ತಿಳಿಯುತ್ತಿದ್ದಂತೆ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳನ್ನು ನೋಡಿ ಕೆಂಡಾಮಂಡಲವಾದರು. ತಕ್ಷಣ ಮಕ್ಕಳನ್ನು ಪಕ್ಕದಲ್ಲಿರುವ ಸರ್ಕಾರಿ ಶಾಲೆಗೆ ಸ್ಥಳಾಂತರಿಸಿ, ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಪ್ರತೀ ಬಾರಿ ಇದೇ ಸಮಸ್ಯೆ ಎದುರಾಗುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ಸರಿಪಡಿಸಲು ಮುಂದಾಗಿದ್ದರೆ ಇಂತಹ ಸಮಸ್ಯೆ ಮರುಕಳಿಸುತ್ತಿರಲಿಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು, ಚರಂಡಿ ನೀರು ಶಾಲೆಗೆ ನುಗ್ಗದಂತೆ ಕ್ರಮ ಕೈಗೊಳ್ಳಲಿ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ.


Spread the love

LEAVE A REPLY

Please enter your comment!
Please enter your name here