ದಾವಣಗೆರೆ:- ಕರ್ನಾಟಕದಲ್ಲಿ ಫೈನಾನ್ಸ್ ಕಿರುಕುಳ ಮುಂದುವರಿದಿದೆ. ಒಂದೆಡೆ ಈ ಫೈನಾನ್ಸ್ ಕಿರುಕುಳ ತಡೆಗಟ್ಟಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ರೆ, ಇತ್ತ ಇದ್ಯಾವುದಕ್ಕೂ ಫೈನಾನ್ಸ್ ನವರು ಕ್ಯಾರೇ ಎನ್ನುತ್ತಿಲ್ಲ. ಬಡವರನ್ನು ಸುಲಿಗೆ ಮಾಡಲೆಂತಲೇ ಇಳಿದಿದ್ದಾರೆ.
ಹೌದು. ಕೇವಲ 99 ರೂ. ಬಾಕಿ ಇರೋದಕ್ಕೆ 58,000 ರೂ. ಕಟ್ಟುವಂತೆ ಬ್ಯಾಂಕೊಂದು ದಾವಣಗೆರೆ ನಗರದ ಚಂದ್ರಶೇಖರ್‌ಗೆ ನೋಟೀಸ್ ಕೊಟ್ಟು, ಹಣ ಪಾವತಿಸುವಂತೆ ಕಿರುಕುಳ ನೀಡುತ್ತಿದೆ.
ಚಂದ್ರಶೇಖರ್ ಆನ್‌ಲೈನ್ ಮೂಲಕ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ 10 ಲಕ್ಷ ರೂ. ಸಾಲ ಮಾಡಿದ್ದರು. ಪ್ರತಿ ತಿಂಗಳು ಕಂತಿನಂತೆ ಎಲ್ಲಾ ಸಾಲವನ್ನು ಕಟ್ಟಿದ್ದರು. ಉಳಿದ 99 ರೂ. ಕಟ್ಟಿಸಿಕೊಂಡು ಕ್ಲೀಯರೆನ್ಸ್ ಕೊಡಿ ಎಂದು ಕೇಳಿದಾಗ 58,000 ರೂ. ಕಟ್ಟುವಂತೆ ಒತ್ತಾಯಿಸಿದ್ದಾರೆ.
ನಿಮಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಬೇಕು ಅಂದ್ರೆ 58,000 ಕಟ್ಟಬೇಕು ಎಂದು ಚಂದ್ರಶೇಖರ್‌ಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೇಳಿದ್ದಾರೆ. ದಾಖಲೆ ಪ್ರಕಾರ ಕೇವಲ 99 ರೂಪಾಯಿ ಕಟ್ಟಿದರೆ ಸಾಲ ಮುಕ್ತವಾಗುತ್ತದೆ. ಆದರೆ ಇದೀಗ ಮೈಕ್ರೋ ಫೈನಾನ್ಸ್ ಸಿಬ್ಬಂದಿ 58,000 ಕಟ್ಟಲೇಬೇಕು ಎಂದು ಚಂದ್ರಶೇಖರ್‌ಗೆ ಕಿರುಕುಳ ನೀಡುತ್ತಿದ್ದಾರೆ. ಚಂದ್ರಶೇಖರ್ ಕಿರುಕುಳ ತಾಳಲಾರದೆ ಈ ಬಗ್ಗೆ ಆರ್‌ಬಿಐಗೆ ಪತ್ರ ಬರೆಯಲು ಮುಂದಾಗಿದ್ದಾರೆ.