ವಿಜಯಸಾಕ್ಷಿ ಸುದ್ದಿ, ಗದಗ
ಇಲ್ಲಿನ ಶಿವಾನಂದ ಬೃಹನ್ಮಠದ ಪೀಠಾಧಿಪತಿ ಉತ್ತರಾಧಿಕಾರತ್ವದ ವಿವಾದ ಮುಂದುವರೆದಿದ್ದು, ಮಠದ ಆವಾರದಲ್ಲಿ ಜಾತ್ರೆಯ ಸಂದರ್ಭದಲ್ಲಿ ಶಾಂತಿ ಭಂಗ ಉಂಟಾಗಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ 13 ಜನರ ಮೇಲೆ ತಾಲೂಕಾ ದಂಡಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳು, ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಗಳನ್ನು ಜಾತ್ರಾ ಮಹೋತ್ಸವದಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದು ಸಹಜವಾಗಿಯೇ ಕಿರಿಯ ಶ್ರೀಗಳ ಭಕ್ತರಿಗೆ ತೀವ್ರ ಅಕ್ರೋಶವನ್ನುಂಟುಮಾಡಿದೆ.
ರಾಜು ಖಾನಪ್ಪನವರ, ಸಂತೋಷ ಕಬಾಡರ, ಶಿವಾನಂದ ಪಲ್ಲೇದ, ರಾಹುಲ್ ಅರಳಿ, ಮಲ್ಲರಡ್ಡಿ ಲಿಂಗದಳ್ಳಿ, ಅನಿಲ್ ಅಬ್ಬಿಗೇರಿ, ಶಿವಕುಮಾರ ತಡಕೋಡ, ಅಮರನಾಥ ಬೆಟಗೇರಿ, ಮಹೇಶ ರೋಖಡೆ, ಕಿಶನ್ ಮೇರವಾಡೆ, ವಿ.ಎಚ್. ದೇಸಾಯಿಗೌಡ್ರ, ಈರಣ್ಣ ಬಾಳಿಕಾಯಿ, ವೀರಣ್ಣ ಹೇಮಾದ್ರಿ ಇವರ ಮೇಲೆ ದಂಡ ಪ್ರಕ್ರಿಯೆ ಸಂಹಿತೆ ಕಲಂ 107ರ ಅಡಿಯಲ್ಲಿ ಗದಗ ಶಹರ ಪೊಲೀಸ್ ಠಾಣೆಯ ಪಿ.ಎ.ಆರ್ ಸಂಖ್ಯೆ 15/2024ರಂತೆ ನೋಟಿಸ್ ನೀಡಲಾಗಿದ್ದು, ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಜು ಖಾನಪ್ಪನವರ, ಮಠ ಯಾವುದೇ ಸ್ವಾಮೀಜಿಗಳಿಗೆ ಸೇರಿದ್ದಲ್ಲ, ಅದು ಭಕ್ತರಿಗೆ ಸೇರಿದೆ. ಭಕ್ತರ ಅಪೇಕ್ಷೆಯಂತೆ ರಥೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಇಬ್ಬರೂ ಶ್ರೀಗಳನ್ನು ಕುಳ್ಳಿರಿಸಬೇಕು. ಇಲ್ಲವೇ ಸದಾಶಿವಾನಂದ ಸ್ವಾಮೀಜಿ ಭಾವಚಿತ್ರ ಅಥವಾ ಉತ್ಸವ ಮೂರ್ತಿಯನ್ನು ಇರಿಸಿ ಜಾತ್ರೆ ನೆರವೇರಿಸಬೇಕು ಎಂದಿದ್ದಾರೆ.
ಮಾರ್ಚ್ 9ರಂದು ನಡೆಯುವ ರಥೋತ್ಸವದಲ್ಲಿ ಮಠದ ಹಿರಿಯ ಶ್ರೀಗಳು ಕಿರಿಯ ಶ್ರೀಗಳೊಂದಿಗೆ ಪಾಲ್ಗೊಳ್ಳುವದಿಲ್ಲ. ತಾವು ಒಂಟಿಯಾಗಿಯೇ ರಥೋತ್ಸವದಲ್ಲಿ ಕುಳಿತುಕೊಳ್ಳುವದಾಗಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮತ್ತೆ ವಿವಾದಕ್ಕೆಡೆ ಮಾಡಿಕೊಟ್ಟಿದೆ.