ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವುದು ಸರಿಯಾಗಿದೆ. ಅಲ್ಲದೇ ನ್ಯಾಯಾಲಯವು ಸಹ ಸಿಎಂ ಅರ್ಜಿಯನ್ನು ತಳ್ಳಿ ಹಾಕಿದೆ, ಸಿಎಂ ಸಿದ್ದರಾಮಯ್ಯನವರು ಕುರ್ಚಿಗೆ ಅಂಟಿಕೊಂಡಿರುವುದು ಸರಿಯಲ್ಲ ಕೂಡಲೇ ರಾಜೀನಾಮೆ ನೀಡಬೇಕು, ರಾಜೀನಾಮೆ ನೀಡುವವರೆಗೂ ನಿರಂತರ ಹೋರಾಟ ಮಾಡುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್ ಹೇಳಿದರು.
ನಗರದ ಕೆಯೂಡಬ್ಲ್ಯೂಜೆ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರು ಕುರ್ಚಿಗೆ ಅಂಟಿಕೊಂಡು ಕುಳಿತಿರುವುದು ಸರಿಯಲ್ಲ, ರಾಜ್ಯದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟ ಬಳಿಕವೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ, ಸಿದ್ದರಾಮಯ್ಯ ಮೊಂಡುತನ ಬಿಟ್ಟು ರಾಜೀನಾಮೆ ನೀಡಲಿ ಎಂದರು.
ವಾಲ್ಮೀಕಿ ನಿಗಮದ 187 ಕೋಟಿ ರೂಪಾಯಿ ಹಗರಣವೂ ಸೇರಿದಂತೆ ಪರಿಶಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಅನುದಾನ ಹೆಚ್ಚು ದುರ್ಬಳಕೆ ಮಾಡಿಕೊಂಡಿದೆ, ಮೂಡಾ ಹಗರಣವು ತಮ್ಮ ಅವಧಿಯಲ್ಲಿ ನಡೆದಿದೆ, ದಲಿತರ ಜಾಗ ಕಬಳಿಸಿ 14 ನಿವೇಶನ ಪಡೆದಿರುವುದು ಅಕ್ರಮಕ್ಕೆ ಸಾಕ್ಷಿಯಾಗಿದೆ ಕೂಡಲೆ ರಾಜೀನಾಮೆ ನೀಡಲಿ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು, ನೈತಿಕವಾಗಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅರ್ಹರಿಲ್ಲ. ಹಿಂದೆ ಬಿಎಸ್‌ವೈ ವಿರುದ್ಧ ಆರೋಪ ಕೇಳಿ ಬಂದಾಗ ರಾಜೀನಾಮೆ ಕೊಟ್ಟಿದ್ದರು.ಈಗ ಸಿದ್ದರಾಮಯ್ಯ ರಾಜೀನಾಮೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ್ ಕ್ಯಾವಟರ್, ಜಿಲ್ಲಾ ವಕ್ತಾರ ಸೋಮಶೇಖರ, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ ಹಾದಿಮನಿ ಇದ್ದರು.