ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಹಕರಿಸಬೇಕೆಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಶುಕ್ರವಾರ ಗದುಗಿನ ರಾಜೀವ ಗಾಂಧಿ ನಗರದ ಉರ್ದು ಶಾಲೆ ನಂ. 4ರಲ್ಲಿ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ನೀಡಿದ ಪಠ್ಯಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ನಮ್ಮ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಆಟ-ಪಾಠದೊಂದಿಗೆ ಬದುಕನ್ನು ಗಟ್ಟಿಗೊಳಿಸಿಕೊಳ್ಳುತ್ತವೆ. ಕ್ಷೀರ ಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ, ಶೂ ಭಾಗ್ಯ, ಶಿಷ್ಯವೇತನದಂತಹ ಕಾರ್ಯಕ್ರಮಗಳು, ಉಚಿತ ಆರೋಗ್ಯ ತಪಾಸಣೆಯನ್ನೂ ನಡೆಸಲಾಗುತ್ತದೆ. ಪ್ರತಿಭಾನ್ವಿತ ಶಿಕ್ಷಕ ಬಳಗವು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಸಮುದಾಯವು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ವಿನಂತಿಸಿದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯೆ ಕೆ.ಎ. ದಾವಲಖಾನವರ ವಹಿಸಿ ಮಾತನಾಡಿ, ಮಕ್ಕಳಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನ ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.
ಶಿಕ್ಷಕ ಐ.ಎ. ಗಾಡಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿ, ನನ್ನ ಶಾಲೆ ನನ್ನ ಕೊಡುಗೆ ಅನ್ವಯ ದಾನಿಗಳ ಹಾಗೂ ಶಿಕ್ಷಕ ಬಳಗದಿಂದ ಈಗಾಗಲೇ ಶಾಲೆಗೆ ಸಾಕಷ್ಟು ಸಾಮಗ್ರಿಗಳನ್ನು ಪಡೆಯಲಾಗಿದ್ದು, ಸರ್ಕಾರಿ ಶಾಲೆಯ ಮೇಲೆ ಸಮುದಾಯಕ್ಕೆ ಇರುವ ವಿಶ್ವಾಸವನ್ನು ಇದು ತೋರಿಸುತ್ತದೆ ಎಂದರು.
ಎಚ್.ಬಿ. ಮಕಾನದಾರ ಹಾಗೂ ಎನ್.ಎಚ್. ಜಕ್ಕಲಿ ಮಾತನಾಡಿದರು. ಎಸ್.ಎಸ್. ಬಳ್ಳಾರಿ ಸ್ವಾಗತಿಸಿ ನಿರೂಪಿಸಿದರು. ಹಸೀನಾ ಮುಲ್ಲಾ ವಂದಿಸಿದರು.