ಒಕ್ಕೂಟದ ಅಭಿವೃದ್ಧಿಗೆ ಸಹಕರಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಧಾರವಾಡ ಹಾಲು ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ಗುರುವಾರ ಗಜೇಂದ್ರಗಡದ ಶ್ರೀ ಜಗದಂಬಾ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

Advertisement

ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ನಿರ್ದೇಶಕರಾದ ನೀಲಕಂಠ ಅಸೂಟಿ ಮಾತನಾಡಿ, ಇತ್ತೀಚೆಗೆ ಸದಸ್ಯರು ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಡುವುದು ಹಾಗೂ ಒಕ್ಕೂಟದಿಂದ ಒದಗಿಸುತ್ತಿರುವ ಪಶು ಆಹಾರವನ್ನು ಹೆಚ್ಚು ಹೆಚ್ಚು ಬಳಸುವುದು ಸೂಕ್ತ. ಇದರಿಂದ ಸಂಘದ ಪ್ರಗತಿ ಹಾಗೂ ಒಕ್ಕೂಟ ಅಭಿವೃದ್ಧಿಯತ್ತ ಸಾಗಲು ಸಾಧ್ಯವಿದ್ದು, ಇದಕ್ಕೆ ಸದಸ್ಯರು ಸಹಕರಿಸಬೇಕೆಂದು ಹೇಳಿದರು.

ಧಾರವಾಡ ಹಾಲು ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕ ಡಿ.ಎಸ್. ಆಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಕ್ಕೂಟವು ಚೆನ್ನಾಗಿದ್ದರೆ ಸಹಕಾರ ಸಂಘಗಳು ಚೆನ್ನಾಗಿರುತ್ತವೆ. ಹಾಲು ಮಹಾಮಂಡಳದ ವ್ಯಾಪ್ತಿಯಲ್ಲಿ ಇರುವ 8 ಪಶು ಆಹಾರ ಘಟಕಗಳು ಕಾರ್ಯಾಚರಣೆಯಲ್ಲಿದ್ದು, ಇವುಗಳಲ್ಲಿ ಪ್ರತಿ ತಿಂಗಳು 75000 ಮೆಟ್ರಿಕ್ ಟನ್ ಪಶು ಆಹಾರ ಉತ್ಪಾದಿಸಿ ಬೇಡಿಕೆ ಅನುಸಾರ ಮಾರಾಟ ಮಾಡಲಾಗುತ್ತಿದೆ. ಇಡೀ ಭಾರತದಲ್ಲಿ ನಂದಿನಿ 2ನೇ ಸ್ಥಾನದಲ್ಲಿದೆ. ಇದಕ್ಕೆ ರೈತರು ಹಾಗೂ ಅಧಿಕಾರಿಗಳು ಕಾರಣವಾಗಿದ್ದಾರೆ ಎಂದು ಹೇಳಿದರು.

ರೋಣ ಹಾಗೂ ಗಜೇಂದ್ರಗಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳಾದ ಜಿ.ಸಿ. ಸಾಲೋಟಗಿಮಠ ಹಾಗೂ ಮಲ್ಲಿಕಾರ್ಜುನ ಉನಚಗೇರಿ, ಜಗದಂಬಾ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಭಾಸ್ಕರಸಾ ಅರ್ಜುನಸಾ ಶಿಂಗರಿ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶುದ್ದ ಹಾಲು ಉತ್ಪಾದನೆ ಹಾಗೂ ಅಗೋಚರ ಕೆಚ್ಚಲುಬಾವು ಕುರಿತು ಡಾ. ಎಂ.ಬಿ. ಮಡಿವಾಳರ, ಸಹಕಾರ ಸಂಘಗಳಲ್ಲಿ ಲೆಕ್ಕಪತ್ರಗಳ ನಿರ್ವಹಣೆ ಕುರಿತು ಬಿ.ಪಿ. ಹಿರೇಮಠ, ಸಹಕಾರ ಕಾಯಿದೆಯ ಮುಖ್ಯಾಂಶಗಳು ಹಾಗೂ ಇತ್ತೀಚಿನ ತಿದ್ದುಪಡಿಗಳ ಕುರಿತು ಪ್ರಶಾಂತ ಮುಧೋಳ ಉಪನ್ಯಾಸ ನೀಡಿದರು.

ಶಾಂತಗಿರಿ ಹಾಗೂ ಬೊಮ್ಮಸಾಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಗೀತಾ ಎಸ್.ಪೂಜಾರ ಮತ್ತು ಶಂಕ್ರಮ್ಮ ಮಾದರ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ಯೂನಿಯನ್‌ನ ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ.ಯಲಿಗಾರ ವಂದಿಸಿದರು.

ಧಾರವಾಡ ಹಾಲು ಒಕ್ಕೂಟದ ಗದಗ ಜಿಲ್ಲೆಯ ಮುಖ್ಯಸ್ಥ ಡಾ. ಪ್ರಸನ್ ಎಸ್.ಪಟ್ಟೇದ ಮಾತನಾಡುತ್ತಾ, ಭೂಮಿಯಲ್ಲಿ ಅನೇಕ ನೈಸರ್ಗಿಕ ಸಂಪನ್ಮೂಲಗಳಿವೆ. ಸಾವಯವ ಕೃಷಿಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಲು ಅನೂಕೂಲವಾಗುತ್ತದೆ. ದನ-ಕರುಗಳ ಗೋಮೂತ್ರ ಮತ್ತು ಸಗಣಿಯಿಂದ ಗೊಬ್ಬರವನ್ನು ತಯಾರಿಸಿ ಹೊಲಕ್ಕೆ ಹಾಕುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here