ವಿಜಯಸಾಕ್ಷಿ ಸುದ್ದಿ, ರೋಣ : 2 ಕೋಟಿ ರೂ ವೆಚ್ಚದಲ್ಲಿ ಈಜುಕೊಳ ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪುರಸಭೆಯ ಉಪಾದ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.
ಅವರು ಶನಿವಾರ ತಾಲೂಕಾ ಕ್ರೀಡಾಂಗಣದಲ್ಲಿ 2 ಕೋಟಿ ರೂ ವೆಚ್ಚದ ಈಜುಕೊಳ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರೋಣ ಪಟ್ಟಣ ಸಮಗ್ರ ಅಭಿವೃದ್ಧಿಯತ್ತ ಸಾಗಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಪಟ್ಟಣದ ನಾಗರಿಕರು ಹಾಗೂ ಯುವಕರು ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕು. ಮುಖ್ಯವಾಗಿ ಪಟ್ಟಣದ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಬೇಕು ಎಂಬ ದೃಷ್ಟಿಯಿಂದ ಶಾಸಕ ಜಿ.ಎಸ್. ಪಾಟೀಲರು ಕ್ರೀಕೆಟ್ ತರಬೇತಿ ಕ್ರೀಡಾಂಗಣವನ್ನು ಸ್ಥಾಪಿಸಬೇಕು ಎಂಬ ಉದ್ದೇಶ ಹೊಂದಿರುವುದು ಸ್ವಾಗತರ್ಹ ಎಂದರು.
ಮುಖಂಡ ಮುತ್ತಣ್ಣ ಸಂಗಳದ ಮಾತನಾಡಿ, ರೋಣ ಪಟ್ಟಣದ ಅಭಿವೃದ್ಧಿಗೆ ಶಾಸಕ ಜಿ.ಎಸ್. ಪಾಟೀಲ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು, ನಾವೆಲ್ಲರೂ ಅವರ ಬೆಂಬಲಕ್ಕೆ ನಿಂತು ಸಹಕರಿಸಬೇಕು. ಮುಖ್ಯವಾಗಿ ಪಟ್ಟಣದ ಕ್ರೀಡಾಪಟುಗಳು ಮಹತ್ತರ ಸಾಧನೆ ಮಾಡಬೇಕು ಎನ್ನುವುದು ಅವರ ಕನಸಾಗಿದೆ. ಈ ದಿಶೆಯಲ್ಲಿ ಹಲವಾರು ಕ್ರೀಡಾಕೂಟಗಳನ್ನು ಏರ್ಪಡಿಸಿ ಉತ್ತೇಜನ ನೀಡಿದ್ದಾರೆ. ಯುವಕರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ರೋಣ ಪಟ್ಟಣದ ಕೀರ್ತಿ ಹೆಚ್ಚಿಸಬೇಕು ಎಂದರು.
ಪುರಸಭೆ ಅಧ್ಯಕ್ಷೆ ರಂಗವ್ವ ಭಜಂತ್ರಿ, ಸದಸ್ಯರಾದ ಬಾವಾಸಾಬ ಬೆಟಗೇರಿ, ದಾವಲಸಾಬ ಬಾಡಿನ, ಗದಿಗೇಪ್ಪ ಕಿರೇಸೂರ, ಶರಣು ಗೋಗೇರಿ, ತಹಸೀಲ್ದಾರ್ ನಾಗರಾಜ ಕೆ, ತೋಟಪ್ಪ ನವಲಗುಂದ, ಸಂಗು ನವಲಗುಂದ, ಪರಶುರಾಮ ಅಳಗವಾಡಿ, ಆನಂದ ಚಂಗಳಿ, ಮೌನೇಶ ಹಾದಿಮನಿ, ಅಭಿಯಂತರ ಸದ್ದಾಂ ದೊಡ್ಡಮನಿ, ಮಲ್ಲಯ್ಯ ಮಹಾಪುರುಷಮಠ, ಸಂಗಪ್ಪ ಜಿಡ್ಡಿಬಾಗಿಲ್, ದುರ್ಗಪ್ಪ ಹಿರೇಮನಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.